ಕನಕದಾಸರ ಜಯಂತಿ ಆಚರಣೆ..

372
rtmp://telugusolutions.com:1935/nammurutv/nammurutv

ಬೆಂಗಳೂರು/ಕೆ.ಆರ್.ಪುರ:ಕನಕದಾಸರು ದಾಸರಲ್ಲೇ ಶ್ರೇಷ್ಠ ದಾಸರು, ಅವರು ಕೇವಲ ಭಕ್ತಿಗೀತೆಗಳನ್ನು ಹಾಡಿಕೊಂಡು, ರಚಿಸಿಕೊಂಡು ತಮ್ಮನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಣೆ ಮಾಡಿಕೊಂಡಿದ್ದರ ಜತೆಗೆ ದಾಸ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ದಾಸಶ್ರೇಷ್ಠ ಕನಕದಾಸರ ೫೩೦ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ರಚಿಸಿದ ಎಲ್ಲ ಕೃತಿಗಳು ಪ್ರಬುದ್ಧ ವಾದದ್ದು, ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಕನಕದಾಸರ ದಾಸ ಸಾಹಿತ್ಯ ಜನ ಸಾಮಾನ್ಯರ ಭಾಷೆಯಲ್ಲಿ ಮೂಡಿ ಬಂದಿದ್ದವು ಎಂದು ಅವರು ಹೇಳಿದರು.
ಧರ್ಮ ಹಾಗೂ ಸಾಹಿತ್ಯ ಎಲ್ಲರಿಗೂ ಅರ್ಥವಾಗುವಂತಿರಬೇಕು. ಸಂಸ್ಕೃತದಲ್ಲಿ ಧರ್ಮ ಬೋಧನೆ ಅಕ್ಷರ ವಂಚಿತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಾತಿವಾದಿಗಳು, ಮತೀಯವಾದಿಗಳಿಗೆ ಕನಕದಾಸರ “ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ” ಎಂದು ಪ್ರಶ್ನಿಸುತ್ತಿದ್ದರು. ಬಸವಾದಿ ಶರಣರು “ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ನಿನ್ನ ಮನೆಯ ಮಗ ಎಂದೆನಿಸಯ್ಯ ಕೂಡಲ ಸಂಗಮ ದೇವ” ಎಂದಿದ್ದರು. ನಾವೆಲ್ಲರೂ ಈ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಅವರು ಹೇಳಿದರು.
ಜಾತಿಯಿಂದ ಯಾರು ಶ್ರೇಷ್ಠರಾಗುವುದಿಲ್ಲ‌, ತನ್ನ ನಡೆ, ನುಡಿ, ಗುಣ, ಮಾನವೀಯ ಮೌಲ್ಯಗಳಿಂದ ಶ್ರೇಷ್ಠ ರಾಗುತ್ತಾರೆ. ಸಮಾಜದಲ್ಲಿ ಮೇಲು ಕೀಳು ಎಂಬುದನ್ನು ನಾವು ಸೃಷ್ಟಿ ಮಾಡಿರುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಸಕ ಬಿ.ಎ.ಬಸವರಾಜ ವಹಿಸಿದ್ದರು. ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕಾಗಿನೆಲೆ ಕನಕ ಪೀಠ ಹೊಸದುರ್ಗ ಶಾಖಾ ಮಠ ಸ್ವಾಮೀಜಿ ಈಶ್ವರಾನಂದ ಸ್ವಾಮಿ ಪಾಲಿಕೆ ಸದಸ್ಯರು ಸುರೇಶ್, ನಾಗರಾಜು, ಜಯಪ್ರಕಾಶ್, ಶ್ರೀಕಾಂತ್, ಅಂತೋನಿ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.