ಅನುದಾನ ಬಳಸದ ಅಧಿಕಾರಿಗಳ ವಿರುದ್ದ ಇಒ ಗರಂ

320

ಬಳ್ಳಾರಿ /ಹೊಸಪೇಟೆ: ಶಾಲಾ ಕಾಲೇಜು ಸೇರಿದಂತೆ ಸರಕಾರಿ ಕಛೇರಿಗಳ ಆವರಣದಲ್ಲಿ ಸಸ್ಯಗಳನ್ನು ನಡೆವುದು, ಸರಕಾರಿ ಶಾಲಾ ಮಕ್ಕಳಿಗೆ ಶೀಘ್ರ ಪಠ್ಯಪುಸ್ತಕ, ಸೈಕಲ್, ವಿದ್ಯಾರ್ಥಿ ವೇತನ ವಿತರಣೆ, ಕುಡಿವ ನೀರು ಪೂರೈಕೆ, ಭತ್ತ ಬಿತ್ತನೆ ಮಾಡಿದ ರೈತರಿಗೆ ಸಹಾಯಧನ, ವಿವಿಧ ಇಲಾಖೆಗಳಲ್ಲಿ ಅನುದಾನವಿದ್ದರೂ ಬಳಕೆ ಮಾಡದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ತಾಪಂ ಇಒ ಜೆ.ವೆಂಕೋಬಪ್ಪ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಎರಡನೆ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿಗಳ ಜೊತೆಗೆ ಇಲಾಖೆಗಳಿಗೆ ಬಂದ ಅನುದಾನ ಹಾಗೂ ಖರ್ಚಿನ ವಿವರವನ್ನೂ ನೀಡಬೇಕು ಎಂದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಧಿಕಾರಿ ಅಶೋಕ ಮಾತನಾಡಿ, ಶಿಕ್ಷಣ ಇಲಾಖೆಯ ವರದಿಯನ್ನು ಒಪ್ಪಿಸುತ್ತಾ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದ್ದರಿಂದ 242 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರಿಗೆ ಮಾಸಿಕ 6000 ರೂ.ವೇತನ ನೀಡಲಾಗುವುದು. ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಿಸಲಾಗಿದೆ. ಷೂಗಳನ್ನು ಖರೀದಿಸಲು ಶಾಲೆಗಳಿಗೆ ವಹಿಸಲಾಗಿದೆ ಎಂದರು. ತಾಪಂ ಉಪಾಧ್ಯಕ್ಷ ಗಾದಿಲಿಂಗಪ್ಪ ಮಾತನಾಡಿ, ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಸಂಪೂರ್ಣ ಪಠ್ಯಪುಸ್ತಕಗಳನ್ನು ವಿತರಿಸಿಲ್ಲ. ಸೈಕಲ್, ಸಮವಸ್ತ್ರ, ಷೂ ಕಳಪೆಯಾಗಿವೆ. ವಿದ್ಯಾರ್ಥಿ ವೇತನವನ್ನು ಸಹ ಇದೂವರೆಗೂ ಅನೇಕ ವಿದ್ಯಾರ್ಥಿಗಳಿಗೆ ತಲುಪಿಲ್ಲವೇಕೆ ಎಂದು ಪ್ರಶ್ನಿಸಿದರು. ತಾಂತ್ರಿಕ ತೊಂದರೆಯಿಂದ ತಡವಾಗಿದ್ದು, ಶೀಘ್ರ ವಿತರಿಸಲಾಗುವುದು ಎಂದು ಉತ್ತರಿಸಿದರು. ಇಒ ಮಾತನಾಡಿ, 15ದಿನದೊಳಗೆ ಸಮರ್ಪಕವಾಗಿ ಮಕ್ಕಳಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಬೇಕೆಂದು ಸೂಚಿಸಿದರು.

ಸಾಮಾಜಿಕ ಅರಣ್ಯ ವಲಯ ಉಪ ಅರಣ್ಯಾಧಿಕಾರಿ ಪುಷ್ಪಂಜಲಿ ಮಾತನಾಡಿ, ತಾಲೂಕಿನಾದ್ಯಂತ ರಸ್ತೆ ಬದಿ ಸಸಿ ನೆಡುವ ಕಾರ್ಯ ಪ್ರಗತಿಯಲ್ಲಿದೆ. ರೈತರು ತಮ್ಮ ಹೊಲದಲ್ಲಿ ಎಕರೆಗೆ 250 ಸಸಿ ನೆಡಲು ಆಸಕ್ತಿ ತೋರಿದರೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಎಂದರು. ಇಒ ಮಾತನಾಡಿ, ರಸ್ತೆ ಅಕ್ಕಪಕ್ಕದಲ್ಲಿ ಸಸಿ ನೆಡುವ ಜೊತೆಗೆ ನಿರ್ವಹಣೆ ಮುಖ್ಯ ಮತ್ತು ಸರಕಾರಿ ಕಟ್ಟಡಗಳ ಆವರಣದಲ್ಲಿಯೂ ಸಸಿ ನೆಡಲು ಸಲಹೆ ನೀಡಿದರು. ಟಿಎಚ್‌ಒ ಡಾ. ಸತೀಶಚಂದ್ರ ಮಾತನಾಡಿ, ಪೋಲಿಯೋ, ಕಣ್ಣಿನ ಶಸ್ತ್ರಚಿಕಿತ್ಸೆ, ಮೀಜಲ್ಸ್ ಮತ್ತು ರಉಬೆಲ್ಲಾ ಕುರಿತು ಮುಂಜಾಗ್ರಕ ಕಮ್ರಕೈಗೊಂಡ ಬಗ್ಗೆ ವಿವರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಫಾಗಿಂಗ್ ಆಗ್ತಿಲ್ಲ. ಸರಿಯಾಗಿ ಕ್ರಮವಹಿಸುವಂತೆ ಟಿಎಚ್‌ಒಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾದೇವ ಸೂಚಿಸಿದರು. ಸಿಡಿಪಿಒ ಪ್ರಭಾಕರ ಮಾತನಾಡಿ, ತಾಲೂಕಿನ 439 ಅಂಗನವಾಡಿಗಳ ಪೈಕಿ 248 ಸರಕಾರಿ ಕಟ್ಟಡದಲ್ಲಿದ್ದು, 155 ಬಾಡಿಗೆ ಕಟ್ಟಡ ಪಡೆಯಲಾಗಿದೆ. ಅಂಗನವಾಡಿಗಳಲ್ಲಿ ಶೌಚಾಲಯಗಳ ಸಮಸ್ಯೆಯಿದೆ. 176 ಅಪೌಷ್ಠಿಕ ಮಕ್ಕಳಿಗೆ ಅಗತ್ಯ ಔಷದೋಪಚಾರಕ್ಕಾಗಿ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದರು. ಮಕ್ಕಳಿಗೆ ಸರಿಯಾಗಿ ಮೊಟ್ಟೆ, ಹಾಲು ವಿತರಿಸಬೇಕೆಂದು ಅಧ್ಯಕ್ಷೆ ಜೋಗದ ನೀಲಮ್ಮ ಸೂಚಿಸಿದರು. ಮುಂಗಾರು ಮಳೆ ತಡವಾಗಿದ್ದರಿಂದ ಬಿತ್ತನೆ ಕಾರ್ಯ ವಿಳಂಭವಾಗಿದೆ. ಆದರೂ ಇತ್ತೀಚೆಗೆ ಸುರಿದ ಮಳೆಗೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕನ್ನಾರಿ ಹೇಳಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ಅಧಿಕಾರಿಗಳ ಪ್ರಗತಿ ವರದಿಯಲ್ಲಿ ಶೂನ್ಯ ಸಾಧನೆ ಕಂಡುಬಂತ್ತು. ಸಂಬಂಧಿಸಿದ ಅಧಿಕಾರಿಗಳು ನಿರಂತರವಾಗಿ ಗೈರಾಗುತ್ತಿದ್ದಾರೆ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಗುಡುಗಿದರು. ತಕ್ಷಣವೇ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡಲು ಇಒ ಸೂಚಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪರಶುರಾಮ, ಆರೋಗ್ಯ ಇಲಾಖೆಯ ಎಂ.ಪಿ.ದೊಡ್ಡಮನಿ, ಪಿಡಬ್ಲ್ಯೂಡಿ ಇಲಾಖೆಯ ಕಿಶೋರ ಕುಮಾರ ತಮ್ಮ ಇಲಾಖೆಯ ಪ್ರಗತಿ ವರದಿಗಳನ್ನು ಒಪ್ಪಿಸಿದರು