ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ,ಮತ ನೀಡಿ

795

ಬೆಂಗಳೂರು ನಗರ/ಕೆ.ಆರ್.ಪುರ:– ಕಳೆದ ಐದು ವರ್ಷದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ. ನಾನು ಅದರಲ್ಲಿ ಉತ್ತೀರ್ಣನಾದರೆ ಈ ಬಾರಿಯೂ ಚುನಾಯಿಸಿ…

ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ವಾಸವಿ ಮಹಲ್‍ನಲ್ಲಿ ಆರ್ಯ ವೈಶ್ಯ ಸಮಾಜದಿಂದ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಮತದಾರರಲ್ಲಿ ಈ ರೀತಿ ಮನವಿ ಮಾಡಿದರು.

ಕಳೆದ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದಾಗಿಯೇ ನಾನು ಚುನಾಯಿತನಾಗಿದ್ದೆ. ಸಜ್ಜನಿಕೆಯಿಂದ, ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದೇನೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತು ಕೇಂದ್ರದ ಹಲವು ಯೋಜನೆಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ವಿವರಿಸಿದರು.

ಕೇಂದ್ರ ಸರಕಾರವು ಯಾವತ್ತೂ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸಿಲ್ಲ. ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನೀಡಿದ್ದಕ್ಕಿಂತಲೂ ಈ ಭಾರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮೂರುಪಟ್ಟು ಅಧಿಕ ಅನುದಾನ ನೀಡಿದೆ ಎಂದು ತಿಳಿಸಿದರು.

ದೇಶಕ್ಕೆ ಸಮರ್ಥ ನಾಯಕತ್ವ ಬೇಕಿದ್ದು ನರೇಂದ್ರ ಮೋದಿಯವರನ್ನು ಪುನಃ ಪ್ರಧಾನಿ ಮಾಡಿ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅದ್ಭುತ ಸಾಧನೆ ಮಾಡಿದ್ದಾರೆ. ದೇಶಾದ್ಯಂತ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಯುವಕರಿಗೆ ಕಂಪ್ಯೂಟರ್ ತರಬೇತಿ, ಇಂಗ್ಲಿಷ್ ಕಲಿಕೆ, ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ನರೇಂದ್ರ ಮೋದಿಯವರು ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ದೇಶದ ಹಿತಕ್ಕಾಗಿ ಬಿಜೆಪಿ ಬೆಂಬಲಿಸಿ. ಸದಾನಂದಗೌಡರನ್ನು ಹರಸಿ ಆಶೀರ್ವದಿಸಿ ಎಂದು ಹೇಳಿದರು.

ವಾಲ್ಮೀಕಿ ಜನಾಂಗಕ್ಕೆ ಮನವಿ

ನಂತರ ಬಸವನಪುರದ ಸಿದ್ದರಾಮಣ್ಣ ಹಾಸ್ಟೆಲ್‍ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸದಾನಂದಗೌಡರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಾಲ್ಮೀಕಿ ಜಯಂತಿ ಘೋಷಿಸಿ ಸರಕಾರಿ ರಜೆ ನೀಡಿದರು. ರಾಜ್ಯಾದ್ಯಂತ ಜಯಂತಿ ಆಚರಣೆ ಮಾಡಲಾಯಿತು. ವಾಲ್ಮೀಕಿ ಜನಾಂಗಕ್ಕೆ ಬಿಜೆಪಿಯು ಹೆಚ್ಚು ಆದ್ಯತೆ ನೀಡಿದೆ. ಶ್ರೀರಾಮುಲು ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ನೀಡಲಾಗಿದೆ ಎಂದು ವಿವರಿಸಿದರು.

ಜನಾಂಗದ ಹಲವು ಮುಖಂಡರು ಮಾತನಾಡಿ, ಬಿಜೆಪಿಯು ತಮಗೆ ಆದ್ಯತೆ ನೀಡುತ್ತಿರುವುದನ್ನು ಮರೆತಿಲ್ಲ. ಪಕ್ಷದ ಬೆಂಬಲಕ್ಕೆ ನಿಲ್ಲುವುದಾಗಿ ಇದೇ ಸಂದರ್ಭದಲ್ಲಿ ಬೆಂಬಲ ಘೋಷಿಸಿದರು.