ಜನರಿಂದ ಬೃಹತ್ ಮಾನವ ಸರಪಳಿ

320

ಕೊಪ್ಪಳ: ಜಿಲ್ಲೆಯನ್ನು ಅಕ್ಟೋಬರ್ 02 ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಸಪ್ತಾಹ ಜಾಗೃತಿ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತಿ ವತಿಯಿಂದ ಕೊಪ್ಪಳ ನಗರದ ಗವಿಮಠ ಮೈದಾನದಲ್ಲಿ ಸುಮಾರು 12 ಸಾವಿರ ಜನರ ಬೃಹತ್ ಮಾನವ ಸರಪಳಿ ಆಯೋಜಿಸಲಾಯಿತು.

ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 12 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ಬೃಹತ್ ಮಾನವ ಸರಪಳಿ ಆಯೋಜಿಸಿದ್ದು, ವಿಶೇಷ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು, ವಯಕ್ತಿಕ ಶೌಚಾಲಯ ಜಾಗೃತಿಗೆ ಕೊಪ್ಪಳ ಜಿಲ್ಲೆ ಕೇವಲ ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ ಜಿಲ್ಲೆಯಾಗಿದೆ. ಅಲ್ಲದೆ, ಶೌಚಾಲಯ ನಿರ್ಮಾಣದಲ್ಲೂ ಕೊಪ್ಪಳ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ಶೌಚಾಲಯ ನಿರ್ಮಾಣವಾಗಿದೆ. ಈಗಾಗಲೆ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಶೌಚಾಲಯ ನಿರ್ಮಾಣವಾಗಿದ್ದು, ಇನ್ನೂ ಸುಮಾರು 50 ಸಾವಿರ ಶೌಚಾಲಯ ನಿರ್ಮಾಣ ಮಾತ್ರ ಜಿಲ್ಲೆಯಲ್ಲಿ ಬಾಕಿ ಇದೆ. ಇದುವರೆಗೂ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳದೇ ಇರುವ ಕುಟುಂಬಗಳು ಎರಡು ತಿಂಗಳ ಒಳಗಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹಾಯಧನವನ್ನು ಸರ್ಕಾರ ನೀಡಲಿದೆ. ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಕಾರ್ಯಕ್ರಮವಿದ್ದು, ಸ್ವಚ್ಛ ಭಾರತ ನಿರ್ಮಾಣದ ಕನಸು ಕಂಡಿದ್ದ ಗಾಂಧೀಜಿಯವರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 02 ರ ಒಳಗಾಗಿ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾ ಪಂಚಾಯತಿ ಗುರಿ ಹಾಕಿಕೊಂಡಿದೆ. ಅಲ್ಲದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಮಾರು 12 ಸಾವಿರ ಜನರನ್ನು ಒಳಗೊಂಡ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೊಪ್ಪಳದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಶೌಚಾಲಯ ರಹಿತ ಕುಟುಂಬಗಳು ಕೂಡಲೆ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳನ್ನು ಸಂಪರ್ಕಿಸಿ, ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಕರೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಜಾಗೃತಿಗೆ ಹಲವರು ತಮ್ಮದೇ ಆದ ಕೊಡುಗೆ ನೀಡಿದರ ಫಲವಾಗಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಕ್ರಾಂತಿಯಾಗಿದೆ. ಗಂಗಾವತಿ ತಾಲೂಕು ಡಣಾಪುರದ ಮಲ್ಲಮ್ಮ, ಸೇರಿದಂತೆ ಹಲವರು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ಈಲ್ಲೆಯ ಜನರು ಶೌಚಾಲಯ ನಿರ್ಮಾಣಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಅಕ್ಟೋಬರ್ 02 ರ ಒಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿಸುವ ಗುರಿ ಸಾಧಿಸಲು ಎಲ್ಲ ರೀತಿಯ ಯತ್ನ ಮಾಡಲಾಗುವುದು. ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಆ. 15 ರವರೆಗೆ ಬಯಲು ಬಹಿರ್ದೆಸೆ ಮುಕ್ತ ಸ್ವಾತಂತ್ರ್ಯ ಸಪ್ತಾಹ ಆಚರಿಸಲಾಗುತ್ತಿದೆ. ಇದರ ಅಂಗವಾಗಿಯೇ ಇಂದು ಬೃಹತ್ ಮಾನವ ಸರಪಳಿಯನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದಾಖಲೆಯ 12 ಸಾವಿರಕ್ಕೂ ಹೆಚ್ಚು ಜನರಿಂದ ಶೌಚಾಲಯ ನಿರ್ಮಾಣ ಕುರಿತ ಪ್ರತಿಜ್ಞಾ ವಿಧಿಯನ್ನು ಏಕಕಾಲಕ್ಕೆ ಸ್ವೀಕಾರ ಮಾಡುವ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನೆರವೇರಿತು.
ಕೊಪ್ಪಳ ನಗರದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ದೈಹಿಕ ಶಿಕ್ಷಕರು, ಸಾರ್ವಜನಿಕರು ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಜನರಿದ ಶೌಚಾಲಯ ಜಾಗೃತಿಗಾಗಿ ನಿರ್ಮಿತವಾದ ಮಾನವ ಸರಪಳಿಯ ಅಭೂತಪೂರ್ವ ದೃಶ್ಯ ಎಲ್ಲರ ಗಮನ ಸೆಳೆಯಿತು. ಡ್ರೋಣ್ ಕ್ಯಾಮೆರಾ ಮೂಲಕ ಕಾರ್ಯಕ್ರಮದ ಸಂಪೂರ್ಣ ಚಿತ್ರೀಕರಣಗೊಳಿಸುವ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತಿಯಿಂದ ಕೈಗೊಳ್ಳಲಾಗಿತ್ತು. ಡ್ರೋಣ್ ಕ್ಯಾಮೆರಾ ತಮ್ಮತ್ತ ತಿರುಗುತ್ತಲೇ ವಿದ್ಯಾರ್ಥಿಗಳ ಘೋಷಣೆ ಮುಗಿಲು ಮುಟ್ಟುತ್ತಿತ್ತು. ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಬೃಹತ್ ಮಾನವ ಸರಪಳಿ ಪರಿಣಾಮಕಾರಿಯಾಗಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಕೂಡ ಪಾಲ್ಗೊಂಡಿದ್ದರು.