ದೂರು ನಿರಾಕರಿಸಿದ ಪೊಲೀಸರು. ಪ್ರತಿಭಟನೆಗೆ ಮುಂದಾದ ಯುವತಿ

362

ಕೋಲಾರ: ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನಲೆ ಅನ್ಯಾಯಕ್ಕೊಳಗಾದ ಯುವತಿ ರೋಜ ಮಳೆಯಲ್ಲೇ ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಮಳೆಯಲ್ಲೇ ಪ್ರತಿಭಟನೆ ನಡೆಸಿದ ಯುವತಿ ತನಗೆ ನ್ಯಾಯ ದೊರಕುವವರೆಗೂ ಜಾಗಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಳು.

ಕೋಲಾರ ತಾಲೂಕಿನ ಅಣ್ಣಹಳ್ಳಿ ನಿವಾಸಿ ರೋಜ ಎಂಬಾಕೆಯನ್ನು ಪಕ್ಕದ ಘಟ್ಟಹಳ್ಳಿ ಗ್ರಾಮದ ನಿವಾಸಿ ಅಂಬರೀಶ್ ಎಂಬಾತ ವರ್ಷಗಳಿಂದ ಪ್ರೀತಿಸಿದ್ದಾನೆ.ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ,ದೈಹಿಕವಾಗಿ ಬಳಸಿಕೊಂಡು ಈಗ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸುತ್ತಿದ್ದಾರೆ. ಈ ಸಂಬಂಧ ಕಳೆದ ಮಾರ್ಚ್ ೧೬ರಂದು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಬಂದಾಗ ಯುವತಿಯ ದೂರನ್ನು ಸ್ವೀಕರಿಸಿದ ಪೊಲೀಸರು ಹಾಗೂ ಕೆಲ ಸಂಘಟನೆಯ ಮುಖಂಡರು ಇಬ್ಬರನ್ನು ಕರೆಸಿ ಸಂಧಾನ ಮಾಡಿದರೂ ನನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದಾಗಲೂ ಪೊಲೀಸರು ಆತನನ್ನು ಉದ್ದೇಶ ಪೂರಕವಾಗಿ ಬಿಟ್ಟು ಕಳುಹಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಆ ಸಂದರ್ಭದಲ್ಲಿ ತನ್ನ ದೂರನ್ನು ಸ್ವೀಕರಿಸದೆ ನಿರ್ಲಕ್ಷ್ಯವಹಿಸಿದ್ದು ಕೂಡಲೇ ಆರೋಪಿಯನ್ನು ಬಂಧಿಸಬೇಕು ಇಲ್ಲವಾದ್ರೆ ತಾನು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದ ರೋಜ.

ಪೊಲೀಸರು ಹಾಗೂ ಯುವತಿಯ ಕುಟುಂಬಸ್ಥರು ಯುವತಿಯನ್ನು ಸಮಾಧಾನಪಡೆಸಿ ಕರೆದೊಯ್ದು ನಂತರ ಯುವಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.