ಮಾನಸಿಕ ಕಾಯಿಲೆಗಳಿಗೆ ವೈಧ್ಯರ ಸಲಹೆ

372

ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಮಾನಸಿಕ ಆರೋಗ್ಯಕಾರ್ಯಕ್ರಮ.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅಧಿಕಾರಿ ಡಾ.ಚಂದ್ರಮೋಹನ್ ಮಾತನಾಡಿ ಖಿನ್ನತೆ, ಸದಾ ಮಂಕಾಗಿರುವುದು, ವಿಚಿತ್ರ ವರ್ತನೆ, ಆತ್ಮಹತ್ಯೆ ಆಲೋಚನೆ, ದೆವ್ವಭೂತ ಬಂದಂತೆ ಆಡುವುದು ಮುಂತಾದ ಲಕ್ಷಣಗಳು ಈ ರೋಗಿಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳು, ಮಾನಸಿಕ ಕಾಯಿಲೆಗಳು ವೈದ್ಯರು ನೀಡುವ ಮಾತ್ರೆ ಮತ್ತು ಔಷಧಿಗಳಿಂದ ಗುಣವಾಗುವುದಿಲ್ಲ ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ.  ಹೀಗಾಗಿ ಗ್ರಾಮೀಣ ಮತ್ತು ಪಟ್ಟಣದ ಇಂತಹ ಬಹುತೇಕ ಮಂದಿ ನಾಟಿ ವೈದ್ಯರನ್ನು ಸಂಪರ್ಕಿಸಿ ಅವರಿಂದ ತಾಯಿತ ಕಟ್ಟಿಸಿಕೊಳ್ಳುವಿಕೆ, ಗಿಡಮೂಲಿಕೆಗಳ ಔಷಧ ಸೇವಿಸುವಿಕೆ, ಯಂತ್ರ ಮಂತ್ರ ಮುಂತಾದುವುಗಳ ಮೊರೆ ಹೋಗುತ್ತಾರೆ. ಕಾಕತಾಳೀಯ ಎಂಬಂತೆ ಅಲ್ಲೊಂದು ಇಲ್ಲೊಂದು ಕಾಯಿಲೆಗಳು ಈ ಚಿಕಿತ್ಸೆಯಿಂದ ತಾತ್ಕಾಲಿಕವಾಗಿ ಗುಣವಾಗಬಹುದು. ಆದರೆ ಆಧುನಿಕ ಚಿಕಿತ್ಸಾ ಪದ್ಧತಿಯಿಂದ ಮಾತ್ರ ಇವುಗಳಿಗೆ ಶಾಶ್ವತ ಪರಿಹಾರ ಸಾಧ್ಯ ಇದನ್ನು ಮನಗಂಡ ಸರ್ಕಾರ ಆರೋಗ್ಯ ಇಲಾಖೆ ಮೂಲಕ ಪ್ರತಿ ೩ ನೆ ಮಂಗಳವಾರ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳಲ್ಲಿ ಇಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಿದೆ. ಮಾನಸಿಕ ರೋಗಗಳಿಗೆ ಚಿಕಿತ್ಸೆ ನೀಡುವ  ನಾಟಿ ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳಿಗೆ ತಮಗೆ ತಿಳಿದಿರುವ ಚಿಕಿತ್ಸೆ ಕೊಟ್ಟು ಅವರನ್ನು ಆಸ್ಪತ್ರೆಗೆ ತೆರಳುವಂತೆ ಹೇಳಬೇಕು. ಆದರೆ ಯಾವುದೇ ಔಷಧಿ, ಗುಳಿಗೆ ಮುಂತಾದುವನ್ನು ಕೊಡಬಾರದು. ಇದರಿಂದ ರೋಗಿಗಳಿಗೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ  ಮನೋವೈದ್ಯ ಡಾ.ಹೇಮಂತ್, ಮಾನಸಿಕ ರೋಗಗಳ ಲಕ್ಷಣಗಳು, ರೋಗಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ವಿವರಿಸಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಹಿಮಾ, ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಆಶಾ ಕಾರ್ಯಕರ್ತೆಯರು, ನಾಟಿ ವೈದ್ಯರು ಹಾಜರಿದ್ದರು.