ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಪಾಲಿಸಲಿ…

482

ಬಳ್ಳಾರಿ:ಕಳೆದ ಒಂದು ವರ್ಷದ ಹಿಂದೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವನ್ನೇ ಪಾಲನೆಗೆ ತಂದು ನಮಗೆ ನ್ಯಾಯ ನೀಡಲಿ ಎಂದು ಸಮಾನತೆ ಯೂನಿಯನ್ ಮುಖಂಡ ರಾಮಕೃಷ್ಣ ಹೇಳಿದರು.

ಅವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದಿನಿಂದ ಆರಂಭಗೊಂಡಿರುವ ಪೌರಕಾರ್ಮಿಕ, ಸಫಾಯಿ ಕರ್ಮಚಾರಿ ಮತ್ತು ಕಸದ ವಾಹನ ಚಾಲಕರ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಮೂಲಭೂತ ಸೇವೆಗಳನ್ನು ಗುತ್ತಿಗೆ ನೀಡಬಾರದೆಂದು ಕಾಯ್ದೆಯೇ ಇದೆ. ಹೀಗಿದ್ದಾಗಲೂ ನಮ್ಮನ್ನು ಗುತ್ತಿಗೆ ಆಧಾರದಲ್ಲಿಯೇ ನೇಮಕ ಮಾಡಿ ಮುಂದುವರೆಸಿದ್ದು ಇದು ಆಧುನಿಕ ಜೀತ ಪದ್ಧತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂವತ್ತು ವರ್ಷಗಳಿಂದ ನಮ್ಮ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ ಎಂದ ಅವರು ತಾನು ಅಧಿಕಾರಕ್ಕೆ ಬಂದರೆ ಗುತ್ತಿಗೆ ಬದಲು ಖಾಯಂ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಚುನಾವಣಾ ಸಂದರ್ಭ ಪ್ರಣಾಳಿಕೆಯಲ್ಲಿ ಹೇಳಿತ್ತು. ತದನಂತರ ಸಚಿವ ಸಂಪುಟ ಸಭೆಯಲ್ಲೂ ಖಾಯಂ ಮಾಡುವ ತೀರ್ಮಾನ ಕೈಗೊಂಡಿತ್ತು. ಆದರೆ ಕೈಗೊಂಡ ತೀರ್ಮಾನವನ್ನು ಪಾಲಿಸಿಲ್ಲ. ಹೀಗಾಗಿ ರಾಜ್ಯವ್ಯಾಪಿ ನಾವು ಹೋರಾಟ ಆರಂಭಿಸಿದ್ದೇವೆ ಎಂದರು.