ಬಂಜಾರಾ ಭಾಷೆಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು.

296

ಬಳ್ಳಾರಿ /ಹೊಸಪೇಟೆ ಬಂಜಾರಾ ಭಾಷೆಯ ಸ್ಥಿತಿಗತಿ , ಸಂಸ್ಕೃತಿ ಮತ್ತು ಆ ಭಾಷೆಗೆ ದೇವನಾಗರಿ ಲಿಪಿ ಅಳವಡಿಕೆಗೆ ಸಂಬಂಧಿಸಿದಂತೆ ಭಾಷಾ ತಜ್ಞ ಡಾ. ಹಂಪಾ ನಾಗರಾಜ್ ಅವರು ನೀಡಿದ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಬಂಜಾರಾ ಭಾಷಾ,ಸಮಾಜ ಮತ್ತು ಸಂಸ್ಕೃತಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚದುರಿ ದೇಶದ ವಿವಿಧೆಡೆ ಇರುವ ಬಂಜಾರಾ ಸಮುದಾಯದ ಜನರ ಭಾಷೆಗೆ ದೇವನಾಗರಿ ಲಿಪಿ ಅಳವಡಿಸುವುದಕ್ಕೆ ನಮ್ಮ ಭಾಷಾ ತಜ್ಞರಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂಬ ಭಾವನೆ ನನಗಿದೆ ಎಂದು ಹೇಳಿದ ಸಚಿವರು, ಬಂಜಾರಾ ಭಾಷೆ, ಕಲೆ ಮತ್ತು ಸಂಸ್ಕೃತಿ ಉಳಿಯಬೇಕು ಮತ್ತು ಬೆಳೆಯಬೇಕು ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ನಾನಾ ಕ್ರಮಗಳನ್ನು ಕೈಗೊಂಡಿದೆ ಎಂದರು. ಈ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಂಬ ದೃಷ್ಟಿಯಿಂದ ಗುಲ್ಬರ್ಗ ವಿವಿಯಲ್ಲಿ ಸೇವಾಲಾಲ್ ಅಧ್ಯಯನ ಪೀಠ ಸ್ಥಾಪನೆ, ಕನ್ನಡ ಮತ್ತು ಜಾನಪದ ವಿವಿಗಳಲ್ಲಿ ಬಂಜಾರಾ ಭಾಷಾ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಹೊನ್ನಾಳಿ ತಾಲೂಕಿನಲ್ಲಿರುವ ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿ ಬಜೆಟ್‌ನಲ್ಲಿ ಹಣ ಮೀಸಲು ಮತ್ತು ಪ್ರಾಧಿಕಾರ ರಚನೆ, ಬಹದ್ದೂರ್ ಬೆಟ್ಟದಲ್ಲಿ ಬಂಜಾರಾ ಸಮುದಾಯಕ್ಕೆ ಸಂಬಂಧಿಸಿದ ಮ್ಯೂಸಿಯಂ ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ 7.50 ಕೋಟಿ ರೂ.ಹಣ ಮೀಸಲಿರಿಸಲಾಗಿದ್ದು 15 ಎಕರೆ ಜಾಗದಲ್ಲಿ ಕೆಲಸ ಆರಂಭವಾಗಿದೆ ಎಂದರು. ಬಂಜಾರಾ ಸಮುದಾಯದ ವೇಷ ಭೂಷಣ ದಿನೇದಿನೇ ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾದರೂ ಆಚ್ಚರಿಯಿಲ್ಲ ಎಂದು ಹೇಳಿದ ಸಚಿವ ಲಮಾಣಿ ಅವರು ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಸಿನಿಮಾಗಳಲ್ಲಿ ನಮ್ಮ ವೇಷ ಭೂಷಣ ಫ್ಯಾಷನ್ ಆಗಿ ಬಳಸುತ್ತಿದ್ದರೇ ನಾವು ಅದನ್ನು ಬಳಸಲು ಹಿಂಜರಿಯುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಭಾಷಾತಜ್ಷ ಹಾಗೂ ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜ ಮಾತನಾಡಿ, ಬಂಜಾರಾ ಸಮುದಾಯ ಇಡೀ ದೇಶದಾದ್ಯಂತ ಚದುರಿ ಹೋಗಿರುವುದರಿಂದ ಕೇವಲ ಕರ್ನಾಟಕದಲ್ಲಿ ಮಾತ್ರ ಈ ಭಾಷೆ, ಸಮಾಜ ಮತ್ತು ಸಂಸ್ಕೃತಿ ಕುರಿತು ಅಧ್ಯಯನ ಮಾಡಿದರೇ ಸಾಲದು ಇಡೀ ದೇಶದ ಬಂಜಾರಾ ಸಮುದಾಯದ ಕುರಿತು ಅಧ್ಯಯನ ಮಾಡುವ ಕೆಲಸವಾಗಬೇಕು. ಅಂದಾಗ ಮಾತ್ರ ಅವರ ಕುರಿತು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯ ಎಂದರು. ಬಂಜಾರಾ ಭಾಷೆಗಳಲ್ಲಿನ ಸೂಕ್ಷ್ಮ ಅಂಶಗಳನ್ನು ದಾಖಲಿಸುವ ಮತ್ತು ಬಂಜಾರಾ ಸಮುದಾಯದ ವಿಶಿಷ್ಟ ಲಕ್ಷಣಗಳನ್ನು ಲಂಬಾಣಿ ಸಮುದಾಯದಲ್ಲಿರುವ ಲಕ್ಷಣಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ದಾಖಲಿಸುವ ಕೆಲಸ ನಡೆಯುವುದು ಅಗತ್ಯವಾಗಿದೆ ಎಂದರು. ಮಾನ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೀರಾನಾಯ್ಕ್ , ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಹೀರಾಲಾಲ್, ನಿಗಮದ ಅಧ್ಯಕ್ಷ ಬಿ.ಬಾಲರಾಜ್ ಮಾತನಾಡಿದರು. ವಿವಿಯ ಕುಲಪತಿ ಡಾ.ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಬಿ‌.ಟಿ.ಲಲಿತಾನಾಯ್ಕ, ಡಾ.ಪಿ.ಮಹಾದೇವಯ್ಯ ಮತ್ತಿತರರು ಇದ್ದರು. ದೇಶದ ವಿವಿಧೆಡೆಯಿಂದ ಬಂಜಾರಾ ಸಮುದಾಯದ ಮುಖಂಡರು ಮತ್ತು ಸಂಶೋಧಕರು ಭಾಗವಹಿಸಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಬಂಜಾ ಸಂಸ್ಕೃತಿ ಬಹುಮುಖಿ ದಾಖಲೀಕರಣ, ಬಂಜಾರರು ಮತ್ತು ಜಿಪ್ಸಿ ರೋಮಾ ಬಂಜಾರಗಳ ಸಂಬಂಧ, ಬಂಜಾರರು ಮತ್ತು ಭಾಷಾ ನೀತಿ, ಸಂಸ್ಕೃತಿ ಮತ್ತು ಸಾಹಿತ್ಯ, ಜಾಗತೀಕರಣ ಸಂದರ್ಭದಲ್ಲಿ ಬಂಜಾರಾ ಭಾಷೆಯ ಸ್ಥಿತಿಗತಿ, ಕನ್ನಡ ಬಂಜಾರಾ ಭಾಷೆಯ ಸಂಬಂಧ ಕುರಿತು ಸಂಪನ್ಮೂಲ ತಜ್ಞರು ವಿಷಯ ಮಂಡಿಸಿದರು.