ಸಾಲ ಪ್ರಮಾಣಪತ್ರ ವಿತರಣೆ..

274

ಬಳ್ಳಾರಿ:ವಸತಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣಪತ್ರ ವಿತರಣೆ-ಬಳ್ಳಾರಿ ಜಿಲ್ಲೆಗೆ 10 ಸಾವಿರ ಮನೆಗಳ ಮಂಜೂರು-ಸಚಿವ ಲಾಡ್.

ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಅಂದರೇ 10 ಸಾವಿರ ಮನೆಗಳನ್ನು ಬಳ್ಳಾರಿ ಜಿಲ್ಲೆಗೆ ರಾಜ್ಯ ಸರಕಾರ ಮಂಜೂರು ಮಾಡಿದೆ. ವಸತಿ ಫಲಾನುಭವಿಗಳನ್ನು ಶೀಘ್ರ ಆಯ್ಕೆ ಮಾಡಿ ಮುಂದಿನ ತಿಂಗಳು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಆಯ್ಕೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಮನೆ ನಿರ್ಮಾಣ ಬಜಾರ್ ಅಡಿಯಲ್ಲಿ ವಿವಿಧ ವಸತಿ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಬ್ಯಾಂಕ್‍ನಿಂದ ಸುಲಭ ಸಾಲ ಸೌಲಭ್ಯ ಸಾಲ ಮಂಜೂರಾತಿ ಪ್ರಮಾಣಪತ್ರಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಂದಾಯ ಭೂಮಿಯಲ್ಲಿ ಮನೆಕಟ್ಟಿಕೊಂಡು ಪಟ್ಟಾ(ಹಕ್ಕುಪತ್ರ)ವಿಲ್ಲದೇ ಪರದಾಡುತ್ತಿದ್ದ ಜನರಿಗೆ ನಮ್ಮ ಸರಕಾರ ನೆರವಿಗೆ ಧಾವಿಸಿದ್ದು, ಇದಕ್ಕಾಗಿಯೇ ಒಂದು ಕಾಯ್ದೆ ತಂದಿದೆ.ಇದರಡಿ ನಮ್ಮ ಜಿಲ್ಲೆಯಲ್ಲಿ 12 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಶೀಘ್ರ ವಿತರಿಸಲಾಗುವುದು ಎಂದರು.

ವಸತಿ ಯೋಜನೆಗಳು ನಿಗದಿಪಡಿಸಿದ ಸಮಯದಲ್ಲಿ ಪೂರ್ಣಗೊಂಡು ಫಲಾನುಭವಿಗಳು ನೆಮ್ಮದಿಯಿಂದ ಬದುಕಬೇಕು ಎಂಬ ದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳ ಮನೆ ನಿರ್ಮಾಣ ಬಜಾರ್ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದ ಸಚಿವ ಸಂತೋಷ ಲಾಡ್ ಅವರು, ನಿಗದಿಪಡಿಸಿದ ಅವಧಿಯಲ್ಲಿಯೇ ಮನೆ ಕಟ್ಟಿಕೊಳ್ಳಬೇಕು ಎಂಬ ಸದುದ್ದೇಶದಿಂದ ಜಿಲ್ಲಾಡಳಿತವು ಬ್ಯಾಂಕ್‍ನಿಂದ ಸುಲಭ ಸಾಲ ಸೌಲಭ್ಯ ವಿತರಿಸುವುದಕ್ಕೆ ಮುಂದಾಗಿದ್ದು, ಫಲಾನುಭವಿಗಳು ವಸತಿಗಳನ್ನು ನಿರ್ಮಿಸಿಕೊಳ್ಳುವುದಕ್ಕೆ ಮಾತ್ರ ಈ ಹಣವನ್ನು ಬಳಸಿಕೊಳ್ಳಬೇಕು. ಅನ್ಯ ಉದ್ದೇಶಕ್ಕೆ ಯಾವುದೇ ಕಾರಣಕ್ಕೂ ಬಳಸಬೇಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ್ ಲಾಡ್ ಅವರು ಮುಖ್ಯಮಂತ್ರಿಗಳ ಮನೆ ನಿರ್ಮಾಣ ಬಜಾರ್ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದರು.
ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ 1344 ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಸಾಲ ಮಂಜೂರಾತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿಮಲ್ಲಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಮೇಯರ್ ಜಿ.ವೆಂಕಟರಮಣ, ಉಪಮೇಯರ್ ಉಮಾದೇವಿ ಶಿವರಾಜ್, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಇನ್ನಿತರರು ಇದ್ರು.