ನುಡಿದಂತೆ ನಡೆದ ಸಚಿವ…

332

ಬಳ್ಳಾರಿ /ಹೊಸಪೇಟೆ: ಪತ್ರಕರ್ತರಿಗೆ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ನೀಡಿದ ಭರವಸೆಯಂತೆ, ರಾಜ್ಯ ಸರಕಾರ ಪತ್ರಿಕಾ ಮಾಧ್ಯಮ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಮುಂದಾಗಿರುವ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಸ್ವಾಗತಿಸಿದೆ ಎಂದು ತಾಲೂಕ ಘಟಕದ ಅಧ್ಯಕ್ಷ ಬಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸಾಪುರ ಬಸವರಾಜ್ ತಿಳಿಸಿದ್ದಾರೆ.

ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಜು.16ರಂದು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್‌ಗೆ ಪತ್ರಕರ್ತರ ಕಲ್ಯಾಣಕ್ಕಾಗಿ ಅಗತ್ಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕೆಂದು ತಾಲೂಕು ಘಟಕದಿಂದ ಒತ್ತಾಯಿಸಿ, ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು, ಅಗತ್ಯ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿಯೆ ಭರವಸೆ ನೀಡಿದ್ದರು. ಅವರ ಭರವಸೆಯಂತೆ ಎರಡೇ ದಿನದಲ್ಲಿ  ಪತ್ರಿಕಾ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಸರ್ಕಾರ ಉದ್ದೇಶಿಸಿದ್ದು, ಅಗತ್ಯ ಮಾಹಿತಿ ಪಡೆಯಲು ಸಹಾಯಕ ಕಾರ್ಮಿಕ ಆಯುಕ್ತರಾದ ಎಚ್.ಎಲ್.ಗುರುಪ್ರಸಾದ ಅವರು ಕಾರ್ಮಿಕ ಆಯುಕ್ತರ ಆದೇಶದ ಮೇರೆಗೆ, ಪತ್ರಿಕಾ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಮಾಹಿತಿ ನೀಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎಸ್.ರಾಜು ಅವರಿಗೆ ಪತ್ರ ಬರೆದಿದ್ದಾರೆ. ಪತ್ರಕರ್ತರ ಕಲ್ಯಾಣ ಮಂಡಳಿ ರಚಿಸುವಲ್ಲಿ ಕಾರ್ಮಿಕ ಸಚಿವರ ವೇಗದ ಕಾರ್ಯಕ್ಕೆ ಸ್ಥಳೀಯ ಪತ್ರಕರ್ತರು ಹರ್ಷವ್ಯಕ್ತಪಡಿಸಿದ್ದಾರೆ.