ಬಯಲು ಶೌಚಾಲಯ ಹೋಗೋರಿಗೆ ಹೂಮಾಲೆ ಹಾಕಿ ಸತ್ಕರ.

355

ಬಳ್ಳಾರಿ/ಹೂವಿನಹಡಗಲಿ:ಬೆಳ್ಳಂಬೆಳಗ್ಗೆ ಚೆಂಬು ಹಿಡಿದುಕೊಂಡು ಹೋಗ್ತಿರೋ ಜನರಿಗೆ ಕಕ್ಕಾಬಿಕ್ಕಿ. ಅಮವಾಸೆ, ಹುಣ್ಣಿಮೆಗೊಂದ ಸಾರಿ ದರುಶನ ಕೊಡೋ ಅಧಿಕಾರಿಗಳು ಬೆಳಗ್ಗೆನೇ ಗ್ರಾಮಗಳಿಗೆ ಅಚ್ಚರಿ ಭೇಟಿ ನೀಡಿದ್ದರು. ತಂಬಿಗೆ ಹಿಡಿದು ಬಯಲು ಶೌಚಾಲಯ ಹೋಗೋರಿಗೆ ಹೂಮಾಲೆ ಹಾಕಿ ಸತ್ಕರಿಸಿದರು‌. ಅರೆ ಇದೆಲ್ಲ ಯಾಕಂತೀರಾ? ಈ ಸ್ಟೋರಿ ನೋಡಿ.

ವತಾರೆ ಎದ್ದು ಚೆಂಬು ಹಿಡಕಂಡು ಹಿತ್ತಲೆ ಕಡೆ ಹೋಗ್ತಿರೋ ಹೆಂಗಸರು, ಬೀಡಿ ಸೇದ್ತಾ ಗುಂಪು ಗುಂಪಾಗಿ ಬಯಲು ಕಡೆ ಬಹಿರ್ದೆಸೆಗೆ ತೆರಳುತ್ತಿರುವ ಗಂಡಸರು. ಇನ್ನೇನು ಬಯಲಿನಲ್ಲಿ ನೆಮ್ಮದಿಯಿಂದ ಶೌಚಕ್ಕೆ ಕೂರಬೇಕು. ಅಷ್ಟೊತ್ತಿಗಾಗಲೇ ವಿಷಲ್ ಸೌಂಡ್ ಹಾಕ್ತಿರೋ ಅಧಿಕಾರಿಗಳು. ಸ್ವತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಹಶೀಲ್ದಾರ್ ರಾಘವೇಂದ್ರರಾವ್ ಬೆಳಗ್ಗೇನೆ ವಿಷಲ್ ಹಾಕಿ ಬಯಲು ಶೌಚಾಲಯ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೆಚ್ಚು ವಾದ ಮಾಡಿದವರಿಗೆ ಹೂಮಾಲೆ ಹಾಕಿ ಅಧಿಕಾರಿಗಳು ಸತ್ಕರಿಸುತ್ತಿದ್ದಾರೆ. ಚೆಂಬಿನೊಂದಿಗಿರುವ ಜನರಿಗೆ ಇದು ಸಾಕಷ್ಟು ಮುಜುಗುರ ತಂದಿದೆ. ಕಳೆದೆರಡು ದಿನಗಳಿಂದ ಹೂವಿನ ಹಡಗಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಯಲು ಮುಕ್ತ ಶೌಚಾಲಯದ ಜಾಗೃತಿ ಮೂಡಿಸುತ್ತಿದ್ದಾರೆ.
ಹೂವಿನಹಡಗಲಿ ತಾಲೂಕು ಪಂಚಾಯತ್ ಇಓ ಸೋಮಶೇಖರ್ ಈ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ವಿಷಲ್ ಅಭಿಯಾನ ನಡೆಸಿ ಯಶಸ್ವಿಯಾಗಿದ್ದರು‌. ಇದೀಗ ಹಡಗಲಿಯ ವಿವಿಧ ಗ್ರಾಮಗಳಿಗೆ ಬೆಳಗ್ಗೆ ಹಾಗೂ ಸಂಜೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೆ ಶೌಚಾಲಯಕ್ಕೆ ನಿರ್ಮಿಸಿಕೊಳ್ಳುವಂತೆ ಒತ್ತಾಯ ಮಾಡಲಾಗುತ್ತಿದೆ. ಗ್ರಾಪಂ ಸದಸ್ಯರು, ಪಿಡಿಓ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಬಳಿ ತೆರಳಿ ಬಯಲು ಶೌಚಾಲಯ ಮಾಡದಂತೆ ವಿಷಲ್ ಅಭಿಯಾನ ನಡೆಸಲಿದ್ದಾರೆ.
ಸ್ವಚ್ ಭಾರತ ಮಿಷನ್ ಹೆಸರಿನಲ್ಲಿ ಸರ್ಕಾರ ಸಾಕಷ್ಟು ಅನುದಾನ ವಿನಿಯೋಗಿಸುತ್ತಿದೆ. ಸ್ವಚ್ಚತೆಯಿಂದ ಸಾಂಕ್ರಮಿಕ ರೋಗಳಿಗೂ ಕಡಿವಾಣ ಹಾಕಬಹುದು. ಈ ಬಗ್ಗೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಿಷಲ್ ಅಭಿಯಾನವನ್ನು ಹತ್ತು ದಿನಗಳ ಕಾಲ ನಡೆಯಲಿದೆ. ಇದೇ ರೀತಿ ಎಲ್ಲೆಡೆ ಜಾಗೃತಿ ಮೂಡಿಸಿದರೆ ಸ್ವಚ್ಚತೆಗೆ ಜನರು ಬದಲಾಗುವ ಸಾಧ್ಯತೆಯಿದೆ.