ಸ್ವಯಂ ಪ್ರೇರಿತ ರಕ್ತದಾನ ಶಿಬಿರ

249

ಚಿಕ್ಕಬಳ್ಳಾಪುರ/ ಗುಡಿಬಂಡೆ: ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಗುಡಿಬಂಡೆ ಶಾಖೆ, ಬೀಚಗಾನಹಳ್ಳಿ ಗ್ರಾಮ ಪಂಚಾಯತಿ, ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಈ ವೇಳೆ ಮಾತನಾಡಿದ ಬೀಚಗಾನಹಳ್ಳಿ ಗ್ರಾಮದ ಮುಖಂಡ ನರೇಂದ್ರ ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರುವ ಮೂಲಕ ರಕ್ತದ ಕೊರತೆಯನ್ನು ನೀಗಿಸಬೇಕೆಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಇನ್ನೂ ಹೆಚ್ಚು ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
ನಂತರ ಬೀಚಗಾನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಸುಬ್ರಮಣಿ ಮಾತನಾಡಿ ರಕ್ತದಾನ ಅಮುಲ್ಯವಾದ ದಾನವಾಗಿದೆ. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸಿ ರಕ್ತದ ಸಮಸ್ಯೆ ಎದುರಿಸುವ ಮಹಿಳೆಯರು, ಮಕ್ಕಳು, ಹಿರಿಯ ರೋಗಿಗಳ ನೆರವಿಗೆ ಮುಂದಾಗುವುದು ಉತ್ತಮ ಕಾರ್ಯವಾಗಿದೆ ಎಂದರು.

ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಸಂಖ್ಯೆ ರಕ್ತದಾನಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಬಿ.ಎನ್.ಮಹಿಮಾ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಾದ ನರಸಿಂಹಯ್ಯ, ಗೀತಾಂಜಲಿ, ಸುನೀಲ್, ಸುದರ್ಮನ್, ನಾಗರಾಜ್, ಗಂಗಾಧರ, ಫಕೃದ್ದೀನ್, ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದ ರವಿ, ಗಾಂಧಿ ಗ್ರಾಮೀಣ ಅಭಿವೃದ್ದಿ ಸಂಘದ ಅಧ್ಯಕ್ಷ ಎಲ್.ನಾಗರಾಜ್ ಸೇರಿದಂತೆ ಹಲವರು ಇದ್ದರು.