ನೀರು ಬಿಡಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಧರಣಿ-ಎಚ್ಚರಿಕೆ

246

ಬಳ್ಳಾರಿ,/ಬಳ್ಳಾರಿ : ರೈತರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ‌ ಮನ್ನಾ ಮಾಡುವುದೂ ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೂಡಲೇ ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಬಿ.ಗೋಣಿ ಬಸಪ್ಪ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರ ಬಿದ್ದಿದೆ. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಿ ಹೊಸ ಸಾಲ ವಿತರಣೆ ಮಾಡಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಫಸಲ್ ಬಿಮಾ ಯೋಜನೆಯಡಿ ರೈತರಿಂದ ಕಟ್ಟಿಸಿಕೊಂಡ ವಿಮಾ ಹಣವನ್ನು ರೈತರ ಖಾತೆಗೆ ಜಮಾವಣೆ ಮಾಡಬೇಕು. ಆಗಸ್ಟ್ 15ರೊಳಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರೊದಗಿಸುವ ಹೆಚ್ಎಲ್ ಸಿ ಮತ್ತು ಎಲ್ಎಲ್ ಸಿ ಕಾಲುವೆಗೆ ನೀರು ಬಿಡಬೇಕು. ಇಲ್ಲದೇ ಹೋದರೆ ಇದೇ ಆ.22 ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪಿ.ಹೊನ್ನೂರು ಸ್ವಾಮಿ, ಯು.ಯಂಕಪ್ಪ, ಉಡುತೆಪ್ಪ, ನಾಗೇಶ್ ಬಿಸಿಲಹಳ್ಳಿ, ಯುವರಾಜಗೌಡ ಇನ್ನಿತರರು ಇದ್ದರು.