ಭಾರಿ ಮಳೆಗೆ ಆಸ್ತಿ, ಪಾಸ್ತಿ ನಷ್ಟ..

313

ಬಳ್ಳಾರಿ:ಕೊಟ್ಟೂರುನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಬಳ್ಳಾರಿ ಜಿಲ್ಲೆ ಕೊಟ್ಟೂರು ಹೋಬಳಿಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿಯಾದ ಘಟನೆ ಸಂಭವಿಸಿದೆ.

ಕೊಟ್ಟೂರು, ರಾಂಪೂರ, ಉಜ್ಜಿನಿ ಮತ್ತು ಚಿರಬಿ ಗ್ರಾಮಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.

ರಾಂಪುರ ಗ್ರಾಮದ ಬಳಿಯ ಹಳ್ಳ ತುಂಬಿ ಹರಿದಿದ್ದರಿಂದ ಗ್ರಾಮದ ಹಲವು ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸಿದ್ದಾರೆ.‌ ಮುಂಜಾಗೃತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಗೊಡಾನ್ ನಲ್ಲಿ ಮಳೆ ನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ವಿತರಣೆ ಮಾಡಬೇಕಿದ್ದ 128 ಅಕ್ಕಿಯ ಚೀಲಗಳು ಹಾಳಾಗಿವೆ.

ಉಜ್ಜಿನಿ ಬಳಿಯ ಮಾಚೇನಹಳ್ಳಿ ಕೆರೆ ಒಡೆದು ಹೋಗಿದ್ದರಿಂದ ಭರ್ತಿಯಾಗಿದ್ದ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಮಳೆಯಿಂದಾದ ಹಾನಿಯ ಅಂದಾಜು ಸರ್ವೆ ಮಾಡುವ ಕಾರ್ಯಕ್ಕೆ ಕಂದಾಯ ಅಧಿಕಾರಿಗಳು, ತಹಶೀಲ್ದಾರರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಚಿರಬಿ ಗ್ರಾಮದ ಸೇತುವೆ ಕೂಡ ಜಖಂ ಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಸಹ ಭೇಟಿ ನೀಡಿ ತಾತ್ಕಾಲಿಕ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ.