ಲಾಲ್ ಬಗ್ ನಲ್ಲಿ ಚಾಮರಾಜ ನಗರ ಈ ಪ್ರಕೃತಿ ಮಕ್ಕಳಿಗೇನು ಕೆಲಸ?

215

ಬೆಂಗಳೂರು: ಸಸ್ಯಕಾಶಿಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಕಾಡಿನ ಜನಜೀವನವನ್ನು ಪ್ರೇಕ್ಷಕರೆದುರು ತೆರೆದಿಡುವ ವಿಭಿನ್ನ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಗಾಜಿನ ಮನೆಯ ಹಿಂಭಾಗದಿಂದ ಬೆಟ್ಟದ ಕಡೆಗೆ ನಡೆದು ಹೋಗುವ ಮಾರ್ಗದಲ್ಲಿ ಕಾಡನ್ನು ಕೃತಕವಾಗಿ ನಿರ್ಮಿಸಿ, ಅಲ್ಲಿ ಗುಡಿಸಲುಗಳನ್ನು ಕಟ್ಟಿ ಅರಣ್ಯಗಳ ನಡುವೆಯೇ ಜನರು ಹೇಗೆ ಜೀವಿಸುತ್ತಾರೆ, ತಮ್ಮ ನಿತ್ಯ ಊಟಕ್ಕಾಗಿ ಯಾವ ರೀತಿಯಲ್ಲಿ ಗೆಡ್ಡೆ ಗೆಣಸುಗಳನ್ನು ಬಳಸುತ್ತಾರೆ ಅವರ ಗುಡಿಸಲುಗಳು ಹೇಗಿರುತ್ತವೆ ಮುಂತಾದ ವಿಚಾರಗನ್ನು ವೀಕ್ಷಕರಿಗೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ.

ಇದಕ್ಕೆ ಪೂರಕವಾಗಿ ಈ ಕೃತಕ ಕಾಡಿನಲ್ಲಿ ಹುಲಿ, ಸಿಂಹ, ಚಿರತೆ, ಜಿಂಕೆಗಳ ಪ್ರತಿಕೃತಿಗಳನ್ನು ತಂದು ಇರಿಸಿ, ಅವುಗಳ ನಡುವೆಯೇ ಜನಜೀವನ ನಡೆಯುತ್ತದೆ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಇವೆಲ್ಲವಕ್ಕೂ ನಂಟು ಕಲ್ಪಿಸಲು ಕಾಡು ಮೃಗಗಳ, ಪಕ್ಷಿಗಳ ಧ್ವನಿಯು ಧ್ವನಿವರ್ಧಕಗಳಲ್ಲಿ ಜೋರಾಗಿ ಮೊಳಗುವಂಥ ಸೌಂಡ್ ಎಫೆಕ್ಟ್ ನೀಡಲಾಗಿದೆ.

ಇದರ ಜತೆಯಲ್ಲೇ, ಅರಣ್ಯ ವಾಸಿಗಳು ಬಳಸುವ ತರಕಾರಿ, ಗೆಡ್ಡೆ ಗೆಣಸುಗಳನ್ನು ಆ ಕೃತಕ ಕಾಡಿನ ಮುಂದೆಯೇ ಮಾರುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ. ಬಂದವರಿಗೆ ಇಲ್ಲಿ ಕೆಜಿಗಟ್ಟಲೆ ಗೆಡ್ಡೆ, ಶುಂಠಿ, ತರಕಾರಿ, ಹಣ್ಣು, ಹಂಪಲುಗಳನ್ನು ಮಾರಾಟ ಮಾಡಲಾಗುತ್ತಿದೆ. ಇವೆಲ್ಲವನ್ನೂ ಕಾಡಿನಲ್ಲೇ ಬೆಳೆದವು ಎಂದು ಹೇಳಲಾಗುತ್ತಿದೆ. ಜನರೂ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಅವರ ಮಾತಿಗೆ ಮರುಳಾಗಿ ಈ ತರಕಾರಿ, ಹಣ್ಣುಗಳನ್ನು ಕೊಳ್ಳುತ್ತಿದ್ದಾರೆ.

ವ್ಯಾಪಾರಿ ದೃಷ್ಟಿಕೋನದಲ್ಲೇ ಈ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಸರಿ. ಆದರೆ, , ಕಾಡಿನಲ್ಲಿ ಜೀವಿಸುವವರನ್ನು ಬಿಂಬಿಸುವ ಯತ್ನಕ್ಕಾಗಿ ಕೆಲವಾರು ಹಳ್ಳಿ ಮಂದಿಯನ್ನು ಕರೆತರಲಾಗಿದ್ದು, ಇವರು ಎಲ್ಲಿಂದ ಬಂದರು, ಯಾರು ಇವರನ್ನು ಕರೆ ತಂದರು. ತಮ್ಮೆಲ್ಲಾ ಪರಿಸರ, ಜನರನ್ನು ಬಿಟ್ಟು ಯಾವ ಒತ್ತಾಸೆಯನ್ನಿಟ್ಟುಕೊಂಡು ಇಲ್ಲಿಗೆ ಬಂದಿದ್ದಾರೆ ಎಂಬಿತ್ಯಾದಿ ವಿಚಾರಗಳು ಇವರನ್ನು ನೋಡಿದವರ ಮನಸ್ಸಿನಲ್ಲಿ ಗಿರಕಿ ಹಾಕದಿರದು. ಹೀಗೆ, ಬಂದಿರುವ ಜನರಲ್ಲಿ ಮಹಿಳೆಯರು, ಪುರುಷರು ಮಕ್ಕಳೂ ಇದ್ದಾರೆ. ಇವರೆಲ್ಲಾ ಆ ಕೃತಕ ಕಾಡಿನಲ್ಲಿ ಕಟ್ಟಲಾಗಿರುವ ಪುಟ್ಟ ಪುಟ್ಟ ಗುಡಿಸಲುಗಳಲ್ಲಿ ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಂಡಿರುವಂತೆ ಇರುವಂತೆ ಸೂಚಿಸಲಾಗಿದೆಯಂತೆ. ಇದಕ್ಕಾಗಿ ಕೂಲಿಯನ್ನೂ ಕೊಡುವ ಭರವಸೆ ನೀಡಲಾಗಿದೆಯಂತೆ. ಆದರೆ, ಈವರೆಗೆ ಒಂದು ನಯಾಪೈಸೆಯೂ ಇವರಿಗೆ ಬಂದಿಲ್ಲ. ಎಲ್ಲಿಂದ ಬಂದವರು ಇವರು? ಇವರೆಲ್ಲಾ ಮೈಸೂರಿನ ಚಾಮರಾಜ ನಗರದ ಅರಣ್ಯ ಪ್ರದೇಶಗಳ ಹಳ್ಳಿಗರು. ಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಬಂದು ತಾವು ಹೇಳಿದಂತೆ ಮಾಡಿದರೆ ಇಂತಿಷ್ಟು ಕಾಸು ನೀಡುವುದಾಗಿ ಯಾರೋ ಏಜೆಂಟರು ಬಂದು ಹೇಳಿದ್ದನ್ನು ನಂಬಿ ಇಲ್ಲಿಗೆ ಇವರು ಬಂದಿದ್ದಾರೆ. ಒಟ್ಟು ಆರು ದಿನಗಳ ಟ್ರಿಪ್ ಎಂದು ಹೇಳಿ ಇವರನ್ನು ಇಲ್ಲಿಗೆ ಕರೆತರಲಾಗಿದೆ. ಮೂರು ಹೊತ್ತಿನ ಊಟ, ಇರಲು ಜಾಗ ಮತ್ತು ದಿನಕ್ಕಿಷ್ಟು ಹಣ ಎಂಬ ಕರಾರಿನೊಂದಿಗೆ ಇವರಿಲ್ಲಿಗೆ ಬಂದಿದ್ದಾರೆ.