ರಾಜ್ಯದೆಲ್ಲಡೆ ಇಂದಿರಾ ಕ್ಯಾಂಟೀನ್ ತೆರೆಯಲು ಆಗ್ರಹ

323

ಬಳ್ಳಾರಿ /ಹೊಸಪೇಟೆ: ಹಸಿವು ಮುಕ್ತ ಕರ್ನಾಟಕ ಮಾಡಬೇಕೆಂದಿರುವ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ನನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್ ತೆರೆಯಬೇಕು ಎಂದು ಆಗ್ರಹಿಸಿ ತಾಲೂಕು ಕಛೇರಿ ಎದುರು ಡಿವೈಎಫ್ಐ ತಾಲೂಕು ಸಮಿತಿ ಅಣಕು ಇಂದಿರಾ ಕ್ಯಾಂಟೀನ್ ಮೂಲಕ ಪ್ರತಿಭಟನೆ ನಡೆಸಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಬಿಸಾಟಿ ಮಹೇಶ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಇನ್ನೂ ಬಡತನ ನೀಗಿಲ್ಲವೆಂದು ಅರಿತುಕೊಂಡಿರುವ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆದು ಜನರ ಹಸಿವನ್ನು ನೀಗಿಸುತ್ತಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಆದರೆ ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಬಾರದು. ರಾಜ್ಯದೆಲ್ಲಡೆ ಇಂದಿರಾ ಕ್ಯಾಂಟೀನ್ ತೆರೆದು ಹಸಿವಿನಿಂದಿ ಬಳಲುತ್ತಿರುವವರಿಗೆ ಅಗ್ಗದ ಬೆಲೆಯಲ್ಲಿ ಆಹಾರ ನೀಡಬೇಕು. ಬೆಂಗಳೂರಿನಲ್ಲಿ 101 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗಿದೆ. ಎಲ್ಲಾ ಕ್ಯಾಂಟೀನ್ಗಳಲ್ಲಿ ಗುಣಮಟ್ಟದ ಉಪಹಾರ ಮತ್ತು ಊಟವನ್ನು ನೀಡಬೇಕು. ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಜನರ ಆಕರ್ಷಣೆಗಾಗಿ ಜನಪರ ಕಾರ್ಯಕ್ರಮ ಮತ್ತು ಜನ ಮೆಚ್ಚುವ ಕೆಲಸಗಳನ್ನು ಮಾಡುವುದು ಸಾಮಾನ್ಯ. ಆದರೆ ಇದು ಚುನಾವಣೆ ತಂತ್ರವಾಗದೆ ಜನರನ್ನು ಹಸಿವು ಮುಕ್ತಗೊಳಿಸುವಂತಾಗಬೇಕು. ಕಡಿಮೆ ಕೂಲಿಯಲ್ಲಿ ಬದುಕುವವರಿಗೆ ಸರ್ಕಾರದ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಖಾಸಗಿ ಹೋಟೆಲ್ಗಳಲ್ಲಿ ಯಾವುದೇ ಮಾನದಂಡಗಳಿಲ್ಲದೆ ಬೆಲೆಗಳನ್ನು ಏರಿಸಲಾಗುತ್ತಿದೆ. ಅದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿವೆ. ಇನ್ನಾದರೂ ಖಾಸಗೀ ಹೋಟೆಲ್ಗಳಲ್ಲಿನ ಉಪಹಾರ ಹಾಗೂ ಊಟದ ಬೆಲೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ತಾಲೂಕು ಕಛೇರಿ ಎದುರು ಅಣಕು ಇಂದಿರಾ ಕ್ಯಾಂಟಿನ್ ತೆರೆದು 5 ರು.ಗೆ ಎರೆಡು ಇಡ್ಲಿ, 3 ರೂ.ಗೆ ಟಿ ಮತ್ತು 10 ರೂ.ಗೆ ಊಟ ನೀಡಿದರು. ನಂತರ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ವಿ.ಸ್ವಾಮಿ, ತಾಲೂಕು ಕಾರ್ಯದರ್ಶಿ ಕಲ್ಯಾಣಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ರಮೇಶ, ಕ್ರೀಡಾ ಕಾರ್ಯದರ್ಶಿ ಪಂಪಾನಂದ, ತಾಯಪ್ಪ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.