ಐಟಿ ದಾಳಿ: 162.06 ಕೋಟಿ ನಗದು, 12.8 ಕೆ.ಜಿ.ಚಿನ್ನಾಭರಣ ಪತ್ತೆ

442
ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಹೆಬ್ಟಾಳಕರ್‌ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಸಣ್ಣ ಕೈಗಾರಿಕಾ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ್‌ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ 162.06 ಕೋಟಿ ರೂ. ಅಘೋಷಿತ ನಗದು, ದಾಖಲೆಗಳಿಲ್ಲದ 41 ಲಕ್ಷ ರು. ಹಣ ಮತ್ತು 12.8 ಕೆ.ಜಿ.ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನೋಟ್ ಬ್ಯಾನ್ ಬಳಿಕ ರಮೇಶ್ ಜಾರಕಿಹೊಳಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ ಕರ್ ಅವರು ಕೋಟ್ಯಂತರ ರೂ ಹಣ ಹೂಡಿಕೆ ಮಾಡಿದ್ದು, ಈ ಬಗ್ಗೆ ತೆರಿಗೆ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಆಧಾರದ ಹಿನ್ನಲೆಯಲ್ಲಿ ಈ ಇಬ್ಬರು ಕಾಂಗ್ರೆಸ್ ನಾಯಕರ ಮನೆ, ಕಛೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಗೋಕಾಕ್ ನಲ್ಲಿರುವ ಜಾರಕಿ ಹೊಳಿ ಮನೆ ಹಾಗೂ ಬೆಳಗಾವಿಯಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದರು. ಈ ವೇಳೆ ಉಭಯ ನಾಯಕರು ತಾವು ನಡೆಸುತ್ತಿರುವ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಹಾಗೂ ಆದಾಯ, ಬಂಡವಾಳ ಹೂಡಿಕೆ ಮಾಡಿರುವ ಕುರಿತು ಸರಿಯಾದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಿಲ್ಲ ಎಂಬ ವಿಚಾರ ಸ್ಪಷ್ಟವಾಗಿದೆ.

ನವೆಂಬರ್ 8 ರನಂತರ ರಮೇಶ್ ಜಾರಕಿಹೊಳಿ ಮತ್ತು ಅವರ ಕಿರಿಯ ಸಹೋದರ ಉದ್ಯಮಿ ಲಖನ್ ಅವರ ವ್ಯವಹಾರದಲ್ಲಿ ಸಾಮಾನ್ಯ ವಹಿವಾಟಿಗಿಂತ ಶೇ30 ರಿಂದ 40 ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಇನ್ನು ಸವದತ್ತಿ ತಾಲೂಕಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಿಸಲು ಹೊರಟಿರುವ ಸಕ್ಕರೆ ಕಾರ್ಖಾನೆಗೆ 100 ಕೋಟಿ ರು. ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ದಾಖಲೆ ತೋರಿಸಲು ಲಕ್ಷ್ಮಿ ಮತ್ತವರ ಸಂಬಂಧಿಕರು ವಿಫಲರಾಗಿದ್ದಾರೆ.

ಐಟಿ ದಾಳಿ ವೇಳೆ, 162.06 ಕೋಟಿ ರು. ಅಘೋಷಿತ ನಗದು ಪತ್ತೆಯಾಗಿದೆ. ಅಲ್ಲದೆ, 41 ಲಕ್ಷ ರು.ಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ವಿವರ ನೀಡಿಲ್ಲ. ಹೀಗಾಗಿ ಆ ಎಲ್ಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 12.8 ಕೆ.ಜಿ.ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇದಲ್ಲದೆ ಆಸ್ತಿ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದ ಹಲವು ಮಹತ್ವದ ಕಡತಗಳು ಪತ್ತೆಯಾಗಿದ್ದು, ಅವುಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.