ಭಾರತ ಸಂವಿಧಾನದ ಆಶಯ ಕುರಿತ ವಿಚಾರ ಸಂಕಿರಣ…

350

ಬಳ್ಳಾರಿ /ಹೊಸಪೇಟೆ. ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಸಂಸ್ಕೃತಿಯನ್ನು ಅಳಿಸುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಸ್ವತಂತ್ರ ಪೂರ್ವದಲ್ಲಿದ್ದ ಬ್ರಿಟೀಷ್ ಆಡಳಿತಕ್ಕೂ, ಪ್ರಸ್ತುತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್.ಡಿ.ಎ ಕೇಂದ್ರ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು. 

ಸ್ಥಳೀಯ ಹೋಟೆಲ್ ಮಲ್ಲಿಗಿ ಸಭಾಂಗಣದಲ್ಲಿ ಶನಿವಾರ ಕೃಷಿ ರಂಗ ಬೆಂಗಳೂರು, ಸ್ಥಳೀಯ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಹಾಗೂ ಬುದ್ಧ-ಬಸವ-ಅಂಬೇಡ್ಕರ್ ಜನಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನದ ಆಶಯ ಕುರಿತ ವಿಚಾರ ಸಂಕಿರಣದಲ್ಲಿ ಪ್ರಸಕ್ತ ಸಾಂಸ್ಕೃತಿಕ ಬಿಕ್ಕಟ್ಟು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಾಷೆ, ಆಹಾರ, ಉಡುಪು ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣುತ್ತಿದ್ದೇವೆ. ಇವುಗಳನ್ನು ಗೌರವಿಸುವಂತೆ ನಮ್ಮ ಪರಂಪರೆ ರೂಪಗೊಂಡಿದೆ. ಈ ಪರಂಪರೆ ವಿರುದ್ದವಾದ ವಿಚಾರ ರಾಜಕಾರಣಗೊಳ್ಳುತ್ತಿರುವುದು ಅಪಾಯವಾಗಿದೆ. ಭಾರತ ದೇಶವು ವೈವಿದ್ಯತೆಯಲ್ಲಿ ಏಕತೆಯ ಸಂಸ್ಕೃತಿಯನ್ನು ಹೊಂದಿದ್ದು, ಅವುಗಳನ್ನು ಒಡೆದುಹಾಕುತ್ತಿರುವುದರಿಂದ ಬಹುಮುಖಿ ಸಂಸ್ಕೃತಿಗೆ ಹೊಡೆತ ಬೀಳಲಿದೆ ಎಂದರು.
ಪ್ರಸ್ತುತ ರಾಜಕಾರಣ ಮತ್ತು ಸಂವಿಧಾನದ ಆಶಯ ಕುರಿತು ಉಪನ್ಯಾಸ ನೀಡಿದ ಹೊಸತು ಪತ್ರಿಕೆ ಸಂಪಾದಕ ಸಿದ್ದನಗೌಡ ಪಾಟೀಲ್, ಬಂಡವಾಳ ಶಾಹಿಗಳಿಂದ ರಾಷ್ಟ್ರಕ್ಕೆ ಮಾರಕವಾಗಿದ್ದು. ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ ಪರದೇಶದ ಬಂಡವಾಳವನ್ನು ಬಯಸುತ್ತಿದ್ದು. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ. ಇದರಿಂದ ಸಂವಿಧಾನದ ಆಶಯದ ದಿಕ್ಕು ತಪ್ಪುತ್ತಿದೆ. ಭಾರತದಲ್ಲಿ ಮೂಂದಿನ ದಿನಗಳಲ್ಲಿ ಏಕಗವಾಕ್ಷಿ ಕಾನೂನು ಜಾರಿಗೆ ಬರುವುದು ಅನುಮಾನವೇ ಇಲ್ಲ. ಇದರಿಂದ ಪ್ರಗತಿಪರರು ಸುಮ್ಮನಿರದೆ ಬಂಡವಾಯಿ ಶಾಹಿಗಳೆ ಭಾರತ ಬಿಟ್ಟು ತೊಗಲಿ ಎನ್ನುವ ಆಂದೋಲನಕ್ಕೆ ಸಜ್ಜಾಗಬೇಕಾಗುತ್ತದೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಮಾತನಾಡಿ, ನ್ಯಾಯಯುತ ಸಮಾಜ ನಿರ್ಮಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರಬಾರದು. ಮೂಲಭೂತ ಸೌಲಭ್ಯಗಳನ್ನು ಅವರಿವರು ನೀಡುವುದಲ್ಲ. ಅದನ್ನು ದುಡಿದು ಗಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಹಂಪಿ ಜಿ.ಪಂ.ಸದಸ್ಯ ಪ್ರವೀಣ್ ಸಿಂಗ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರೈತ ಮುಖಂಡ ಜೆ.ಎಂ.ವೀರಸಂಗಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ವಿ.ವೆಂಕಟೇಶ್ವರ ರೆಡ್ಡಿ, ಶ್ರೀಕೃಷ್ಣದೇವರಾಯ ವಿವಿ ಪ್ರಾಧ್ಯಾಪಕ ಎನ್.ಶಾಂತ ನಾಯಕ, ಸಹಕಾರ ಸಂಘಗಳ ಉಪನಿಬಂಧಕ ಡಾ.ಜಿ.ಉಮೇಶ್, ಕೆ.ಜಿ.ವಿ.ಎಸ್ ಕಾರ್ಯದರ್ಶಿ ಈ.ಬಸವರಾಜ್, ರವೀಂದ್ರನಾಥ ಸಿರಿವರ, ಪ್ರಿಯದರ್ಶಿನಿ ಮಹಿಳಾ ಸಂಘದ ಅಧ್ಯಕ್ಷೆ ಡಾ.ಎಸ್.ಡಿ.ಸುಲೋಚನಾ ಟಿ.ಎಂ.ನಾಗಭೂಷಣ, ನಾಗರಾಜ್ ಪತ್ತಾರ್, ಗ್ಯಾನಪ್ಪ ಬಡಿಗೇರ್, ನಿಂಬಗಲ್ ರಾಮಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.