ಪಾಲಿಕೆ ದಿಢೀರ್ ಕಾರ್ಯಾಚರಣೆ,ಪಿಒಪಿ ಗಣೇಶಮೂರ್ತಿಗಳ ವಶ

327

ಬಳ್ಳಾರಿ,/ಬಳ್ಳಾರಿ : ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಿ ಮಾರಾಟ ಮಾಡುತ್ತಿದ್ದ ವಿವಿಧ ರೀತಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆಯ ತಂಡ ಮಂಗಳವಾರ ಸಂಜೆ ದಿಢೀರ್ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ
ನಗರದ ಸುಧಾಕ್ರಾಸ್, ದುರ್ಗಮ್ಮ ಗುಡಿ, ಕಪಗಲ್ಲು ರಸ್ತೆ, ಎಸ್ಪಿ ಸರ್ಕಲ್, ಬಸವನ ಕುಂಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ತಯಾರಿಸಿ ಶೆಡ್‍ಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ ಅವರ ನೇತೃತ್ವದ ತಂಡ ವಶಪಡಿಸಿಕೊಂಡಿತು.
ಪಿಒಪಿ ಗಣೇಶಮೂರ್ತಿಗಳ ತಯಾರಕರಿಗೆ 15 ದಿನಗಳ ಮುಂಚೆ ನೋಟಿಸ್ ನೀಡಿದ್ದ ಮಹಾನಗರ ಪಾಲಿಕೆ, ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ಗಣೇಶಮೂರ್ತಿಗಳು ತಯಾರಿಸಕೂಡದು, ಒಂದು ವೇಳೆ ತಯಾರಿಸಿ ಮಾರಾಟ ಮಾಡಲು ಯತ್ನಿಸಿದರೇ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.
ಪಾಲಿಕೆ ನೀಡಿದ ನೋಟಿಸ್‍ಗೆ ನಿರ್ಲಕ್ಷ್ಯ ತೋರಿ ತಯಾರಿಸಿ ಮಾರಾಟ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ, ಅವುಗಳನ್ನು ಆ.22(ಮಂಗಳವಾರ)ರ ಸಂಜೆ 4ರವರೆಗೆ ತೆಗೆದುಕೊಂಡು ಬಳ್ಳಾರಿ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು. ಆದರೂ ಅವರು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಪರಿಸರ ಎಂಜನಿಯರ್ ಶ್ರೀನಿವಾಸ್ ತಿಳಿಸಿದರು.
ವಶಪಡಿಸಿಕೊಂಡ ಪಿಒಪಿ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆಯ ಜಾಗದಲ್ಲಿ ಒಂದೇಡೆ ಇಡಲಾಗುವುದು. ಅವುಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗೈಡ್‍ಲೈನ್ಸ್ ಅನುಸಾರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಮಹನಾಗರ ಪಾಲಿಕೆಯ ಸಿಬ್ಬಂದಿ ಇದ್ದರು.