ಜಿಲ್ಲೆಯಾದ್ಯಂತ ಹನಿಯುತ್ತಿರುವ ಜಡಿಮಳೆ..

310

ಬಳ್ಳಾರಿ/ಹೊಸಪೇಟೆ ಇಷ್ಟು ದಿವಸ ಆಗಸದತ್ತ ಮುಖ ಮಾಡಿ ಮಳೆ, ಮಳೆ, ಮಳೆ ಅಂತ ಚಾತಕ ಪಕ್ಷಿ ಯಂತೆ ಕಾಯುತ್ತಿರುವ ಕೃಷಿಕರು ಹಾಗೂ ಜನ-ಜಾನುವಾರುಗಳಿಗೆ ನಿನ್ನೆಯಿಂದ ಹನಿಯುತ್ತಿರುವ ಜಡಿಮಳೆಯಿಂದಾಗಿ ಕೊಂಚ ರಿಲೀಫು ಸಿಕ್ಕಂತಾಗಿದೆ.

ಹೊಸಪೇಟೆಯಲ್ಲಿ ಮಳೆಯಿಂದ ಕೆಲ ತಗ್ಗುಪ್ರದೇಶದಲ್ಲಿ ನೀರು ನಿಂತು ರಸ್ತೆಯ ಮೇಲೆ ನಡೆದಾಡುವುದುಕ್ಕೂ ತೊಂದರೆ ಯಾಗಿದೆ ಚರಂಡಿಯು ತುಂಬಿ ತುಳುಕುತ್ತಿದ್ದು ಕಂಡುಬಂತು ಹಂಪಿ ಯಲ್ಲಿ ವಿದೇಶೀಯರು ಮಳೆನೋಡಿ ಹರ್ಷವ್ಯಕ್ತಪಡಿಸಿದರು

ಮುಂಗಾರು ಹಂಗಾಮಿಗೆ ಅಷ್ಟಿಷ್ಟು ಹೊಲ-ಗದ್ದೆ ಹದ ಮಾಡಿಕೊಂಡಿದ್ದ ಕೃಷಿಕರಿಗೆ ಭಾದ್ರಪದ ಮಾಸದ ಪ್ರತಿಪದೆ ಕೊಂಚ ಭರವಸೆ ಮೂಡಿಸಿದೆ.

ರಾಡಾರ್ ನೆರವಿನೊಂದಿಗೆ ಸರ್ಕಾರ ಮೋಡ ಬಿತ್ತನೆ ಮಾಡುವ ಸರ್ಕಸ್ ಗೂ ಇದಕ್ಕೂ ತಾಳೆ ಇಲ್ಲವಾದರೂ ಹುಬ್ಬಾ ಮಳೆ ಜಡಿಮಳೆಯಾಗಿ ರೂಪಾಂತರ ತಾಳಿ ಸರ್ಕಾರಕ್ಕೂ, ಜನರಿಗೂ ಹುಬ್ಬೇರಿಸುವಂತೆ ಮಾಡುತ್ತಿದೆ.

ಹಳ್ಳ-ಕೊಳ್ಳಗಳು ಹುಬ್ಬಾ ಮಳೆಯಿಂದಾಗಿ ಭೋರ್ಗರೆದು ಹರಿಯದಿದ್ದರೂ ಬತ್ತಿ ಹೋಗಿದ್ದ ನೆಲದ ಒಡಲಿಗೆ ಇದೀಗ ಪಸೆ ಆವರಿಸಿಕೊಂಡಿದೆ.

ನಿನ್ನೆಯವರೆಗೂ ಶ್ರಾವಣದ ಹೊಂಬೆಳಕಿನಂತೆ ಗೋಚರಿಸುತ್ತಿದ್ದ ಬಳ್ಳಾರಿ ಜಿಲ್ಲೆಯ ಮುಗಿಲ ಮಾರಿಯ ತುಂಬ ಇಂದು ಬೆಳಿಗ್ಗೆಯಿಂದ ಕರಿಮೋಡಗಳು ಆವರಿಸಿಕೊಂಡಿವೆ.

ಒಟ್ಟಿನಲ್ಲಿ ನೆಲದ ಪಸೆ ಆರುವ ಮುನ್ನ ಮೂರು ಕಾಸಿಗೆ ಆಗುವಷ್ಟಾದರೂ ಬೀಜ ಬಿತ್ತನೆ ಮಾಡಿ, ಧಾನ್ಯದ ಫಸಲು ಬಾಚಿಕೊಳ್ಳಬೇಕೆಂಬ ಹಪಹಪಿಯಲ್ಲಿ ರೈತ ಸಂಕುಲ ತುದಿಗಾಲಲ್ಲಿ ನಿಂತಿದೆ.