ಯಡಿಯೂರಪ್ಪ ಪತ್ರಿಕಾಗೋಷ್ಠಿ..

537

ಬಳ್ಳಾರಿ /ಹೊಸಪೇಟೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಗಳಿಂದ ಸ್ಪರ್ಧಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸ್ಥಳೀಯ ಟಿ.ಬಿ.ಡ್ಯಾಂ ನ ವೈಕುಂಠ ಅತಿಥಿ ಗೃಹದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ. ಆದರೆ ತಾವು ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಗಳ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವುದು ಖಾತರಿಯಿಲ್ಲ. ಅದಕ್ಕಾಗಿ ನನ್ನ ಸ್ಪರ್ಧೆ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು.
ಮಾಜಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಿ, ತುಂಗಭದ್ರಾ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸಲಾಗುವುದು. ತುಂಗಭದ್ರಾ ಜಲಾಶಯವನ್ನು ಉಳಿಸಲು ಸರ್ವ ರೀತಿಯ ಕ್ರಮವನ್ನು ಬಿಜೆಪಿ ಕೈಗೊಳ್ಳಲಿದೆ ಎಂದರು

ಸಿ.ಎಂ. ಹಾಗೂ ನೀರಾವರಿ ಸಚಿವರಿಂದ
ರಾಜ್ಯದ ಜನತೆಗೆ ವಿಶ್ವಾಸ ದ್ರೋಹ-ಬಿ.ಎಸ್.ಯಡಿಯೂರಪ್ಪ
ಹೊಸಪೇಟೆ.ಸೆ.20 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲರು ರಾಜ್ಯದ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡುವ ಮೂಲಕ ರಾಜ್ಯದ ಜನತೆಗೆ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿಂದು ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸ್ಥಳೀಯ ಟಿ.ಬಿ.ಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯದ ಕೃಷ್ಣ ಭಾಗ್ಯ ಜಲ ನಿಗಮದ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ ಹಣವನ್ನು ಖರ್ಚು ಮಾಡುವುದಾಗಿ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಕಳೆದ 4 ವರ್ಷಗಳಲ್ಲಿ ಕೃಷ್ಣಭಾಗ್ಯ ಜಲ ನಿಗಮದ ಯೋಜನೆಗಳಿಗೆ 40 ಸಾವಿರ ಕೋಟಿ ರೂ ಖರ್ಚು ಮಾಡಬೇಕಾಗಿತ್ತು. ಆದರೆ ಖರ್ಚು ಮಾಡಿದ ಹಣ ಮಾತ್ರ ಕೇವಲ 5600 ಕೋಟಿ ರೂ ಗಳು. ಅಲ್ಲದೆ ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ಮೀಸಲಿಟ್ಟ ಹಣ 41 ಸಾವಿರ ಕೋಟಿ ರೂ. ಬಿಡುಗ‌ಡೆ ಮಾಡಿದ ಹಣ 34,146 ಕೋಟಿ ರೂ ಗಳು, ಅದರಲ್ಲಿ ಖರ್ಚಾಗಿರುವುದು 32,300 ಕೋಟಿ ಮಾತ್ರ.
ಇದು ಈ ಭಾಗದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲರು ಮಾಡಿದ ನಂಬಿಕೆ ದ್ರೋಹ ಹಾಗೂ ವಿಶ್ವಾಸ ದ್ರೋಹವಾಗಿದೆ. ಇದರಿಂದ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದರು. ಅಲ್ಲದೆ ಕೊಪ್ಪಳ ಜಿಲ್ಲೆಯಲ್ಲಿ ಕೃಷ್ಣ ಬಿ ಸ್ಕೀಂ ಯೋಜನೆಯಡಿ 2.8 ಲಕ್ಷ ಎಕರೆ ನೀರಾವರಿ ಯೋಜನೆಗೆ 2015 ರಲ್ಲಿಯೇ ಸರ್ವೆ ಮಾಡಿ ವರದಿ ನೀಡಲಾಗಿದೆ. ಆದರೆ ಈವರೆಗೆ ಯೋಜನೆಗೆ ಒಪ್ಪಿಗೆ ನೀಡಿಲ್ಲ. ಕಾಮಗಾರಿ ಆರಂಭಿಸಿಲ್ಲ ಈ ಕುರಿತು ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದರು.
ನೀರಾವರಿ ಸಚಿವ ಕಮಿಷನ್ ಏಜೆಂಟ್
ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲರು ಕಮಿಷನ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರತಿ ನೀರಾವರಿ ಯೋಜನೆಯ ಮೊತ್ತದಲ್ಲಿ ಶೇ.45 ರಿಂದ ಶೇ.50 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ನೀರಾವರಿ ಯೋಜನೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸುತ್ತಿಲ್ಲ. ಹಗಲು ದರೋಡೆ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕರಾದ ಶರಣಪ್ಪ, ಕೆಸರಟ್ಟಿ ವೀರಪ್ಪ, ಪರಣ್ಣ ಮುನವಳ್ಳಿ, ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಬಳ್ಳಾರಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಿ.ಎಸ್.ಜಂಬಯ್ಯ ನಾಯಕ, ಕೊಪ್ಪಳ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಂಗನಾಳ್, ಕೆ.ಬಿ.ಶ್ರೀನಿವಾಸ ರೆಡ್ಡಿ, ಡಿ.ಎಂ.ಶಶಿಧರ ಸ್ವಾಮಿ, ಮೈಲಾರಲಿಂಗ ನಾಯಕ, ಬಸವರಾಜ ನಾಲತ್ವಾಡ್, ಜಿವರತ್ನಂ. ಉಪಸ್ಥಿತರಿದ್ದರು.