ಎಲ್ಲರೊಳಗೊಂದಾಗು ಮಂಕುತಿಮ್ಮ..

431

ಬಳ್ಳಾರಿ/ ಬಳ್ಳಾರಿ:ರಾಜಕಾರಣದಲ್ಲಿ ಯಾರು ಯಾರಿಗೂ ಶತೃಗಳಲ್ಲ. ಯಾರು ಯಾರಿಗೂ ಮಿತ್ರರಲ್ಲ ಎನ್ನುವುದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಸಮ್ಮಿಲನ ಮತ್ತೊಮ್ಮೆ ರುಜುವಾತು ಮಾಡಿತು.

ಡಿವಿಜಿ ಅವರು, ಎಲ್ಲರೊಳು ಒಂದಾಗು ಮಂಕು ತಿಮ್ಮ ಎಂದು ಹೇಳುವ ಹಾಗೆ ಲಾಡ್ ಮತ್ತು ರೆಡ್ಡಿ ಅವರ ಸ್ನೇಹ ಬಾಂಧವ್ಯ ಗಮನಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಖತ್ ಮಜಾ ತೆಗೆದುಕೊಂಡರು.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭಕ್ಕೆಂದು ನಿನ್ನೆಯ ದಿನ ರಾತ್ರಿ ಇಲ್ಲಿನ ಡಾ.ರಾಜಕುಮಾರ್ ರಸ್ತೆಯ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಅವರನ್ನು ಮಾತನಾಡಿಸಲು ಹೋದಾಗ ಸರ್ಕಾರಿ ಅತಿಥಿಗೃಹದಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಪರಸ್ಪರ ಮುಖಾಮುಖಿ ಆದರು. ಆತ್ಮೀಯವಾಗಿ ಕುಶಲೋಪರಿ ಹಂಚಿಕೊಂಡರು.

ಸಚಿವ ಸಂತೋಷ್ ಲಾಡ್ ಕೂಡ ವೀವಿ ಸಂಘದ ಶತಮಾನೋತ್ಸವದಲ್ಲಿ ಪಾಲ್ಗೊಂಡು ನಿನ್ನೆಯ ದಿನ ಸರ್ಕಾರಿ ಅತಿಥಿಗೃಹದಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು ಮನೆ  ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಮತ್ತು ನವೆಂಬರ್ ನಲ್ಲಿ ನಡೆಯಲಿರುವ ಹಂಪಿ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಸಚಿವ ಲಾಡ್ ನಿನ್ನೆಯ ದಿನ ಅತಿಥಿ ಗೃಹದಲ್ಲಿಯೇ ಠಿಕಾಣಿ ಹೂಡಿದ್ದರು.

ಈ ವೇಳೆ ಪರಸ್ಪರ  ಮುಖಾಮುಖಿಯಾದ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್, ಬಿಜೆಪಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸ್ನೇಹದಿಂದ ಹಸ್ತಲಾಘವ ಚಾಚಿದರು. ಪರಸ್ಪರರು ಅಭಿವೃದ್ಧಿ ಕೆಲಸಗಳ ಕುರಿತು ಕೂಡ ವಿಷಯಗಳನ್ನು ಹಂಚಿಕೊಂಡರು.

ಮಾಜಿ ಶಾಸಕ ಬಿಜೆಪಿಯ ನೇಮಿರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಮತ್ತು ಕಾಂಗ್ರೆಸ್‍ನ ಹಲವು ಮುಖಂಡರು ಸಹ ಸ್ನೇಹಕ್ಕೂ ಸೈ-ಸಮರಕ್ಕೂ ಸೈ ಎಂಬ ಭಾವ ವ್ಯಕ್ತಪಡಿಸಿ ಲಾಡ್ ಮತ್ತು ರೆಡ್ಡಿ ಸಮಾಗಮಕ್ಕೆ ಸಾಕ್ಷಿಯಾದ್ರು.