ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

235

ಬಳ್ಳಾರಿ /ಬಳ್ಳಾರಿ:ಈ ಬಾರಿ ಅಕ್ಟೋಬರ್ 8 ರಂದು ಬೆಂಗಳೂರಿನ ಅರಮನೆ ಮೈದಾನ ಗೇಟ್ 1 ರಲ್ಲಿ ನಡೆಯಲಿರುವ ರಾಜ್ಯಮಟ್ಟದ 9ನೇ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಕೇಂದ್ರ ಸರ್ಕಾರವು ಕೂಡಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ಜಿಲ್ಲಾಧ್ಯಕ್ಷ ಯು.ಸೋಮಣ್ಣ ಆಚಾರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕೆ.ಪಿ.ನಂಜುಂಡಿ ಅವರ ಸಾರಥ್ಯದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಹಮ್ಮಿಕೊಂಡಿರುವ ಜಯಂತ್ಯುತ್ಸವದಲ್ಲಿ ವಿಶ್ವಕರ್ಮ ಸಮುದಾಯದ ಸಂಘಟನೆಗೆ ಶ್ರಮಿಸಲಾಗುತ್ತದೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ, ಮಹಿಳಾ ಸಬಲೀಕರಣ, ಯುವಕ-ಯುವತಿಯರಿಗೆ ಸ್ವಾವಲಂಬಿಗಳಾಗಲು ಆರ್ಥಿಕ ಸಹಾಯ, ಪಂಚ ಕಸುಬು ಉಳಿಸಿ ಕೊಳ್ಳಲು ಆರ್ಥಿಕ ಸಹಾಯ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಲಾಗುತ್ತದೆ. ಪ್ರತಿವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ನಿಮಿತ್ತ ದೇಶಾದ್ಯಂತ ರಜಾ ಘೋಷಣೆ ಮಾಡುವ ಮೂಲಕ ಸೃಷ್ಟಿಕರ್ತ ವಿಶ್ವಕರ್ಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇಶದೆಲ್ಲೆಡೆ ಚಿನ್ನ, ಬೆಳ್ಳಿ ಕೆಲಸ ಗಾರರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಕಾನೂನು ರಚಿಸಿ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ವಿವಿಧ ಭಾಷೆಗಳನ್ನಾಡುವ 10 ಲಕ್ಷ ವಿಶ್ವಕರ್ಮರೂ ಸೇರಿದಂತೆ ಕನ್ನಡವನ್ನಾಡುವ 35 ಲಕ್ಷ ಜನಸಂಖ್ಯೆ ಇದೆ. ಕಳೆದ 16 ವರ್ಷಗಳಿಂದ ಕೆ.ಪಿ.ನಂಜುಂಡಿ ಅವರು ರಾಜ್ಯಾದ್ಯಂತ ಸಂಚರಿಸಿ ಸಂಘಟನೆ ಮಾಡುತ್ತಿದ್ದಾರೆ. ಸತತ ಹೋರಾಟ, ಪಾದಯಾತ್ರೆ, ಧರಣಿ ನಡೆಸುವ ಮೂಲಕ ವಿಶ್ವಕರ್ಮ ಅಭಿವೃದ್ಧಿ ನಿಗಮ, ವಿಶ್ವಕರ್ಮ ಜಯಂತಿ ಸರ್ಕಾರದ ಕಾರ್ಯಕ್ರಮವನ್ನಾಗಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಈ ಜಯಂತ್ಯುತ್ಸವದಲ್ಲಿ ರಾಜ್ಯದ ವಿಶ್ವಕರ್ಮ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

*ಅಮಿತ್ ಷಾ ಭಾಗಿ:*
ಕಳೆದ 16 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದು ಮೋಸ ಹೋಗಿರುವ ಕೆ.ಪಿ.ನಂಜುಂಡಿ ಅವರು, ಮೋದಿ ಅವರ ಸಾರಥ್ಯವನ್ನು ಮೆಚ್ಚಿಕೊಂಡು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಯಂತ್ಯುತ್ಸವಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅನಂತ್ ಕುಮಾರ್, ಸದಾನಂದಗೌಡ ಅನಂತ್ ಕುಮಾರ್ ಹೆಗಡೆ, ಬಿಜೆಪಿ ಅಗ್ರಗಣ್ಯ ನಾಯಕರಾದ ಪಿ.ಮುರಳೀಧರ್ ರಾವ್, ಪುರಂದರೇಶ್ವರಿ, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖರು ಕೂಡ ಭಾಗವಹಿಸಲಿದ್ದಾರೆ ಎಂದರು.
ಸಂಘದ ಪದಾಧಿಕಾರಿಳಾದ ಹೆಚ್ ಕೆ ವೀರಾಚಾರ್, ನಾರಾಯಣಾಚಾರ್, ನಿವೇದಿತಾ ಹೆಚ್ ಕೆ, ಸುನೀತಾ, ಹೆಚ್.ಮೌನೇಶ್ ಲಕ್ಷ್ಮಣಾಚಾರ್, ಬಿಜಿ ಬಡಿಗೇರ್ ಇನ್ನಿತರರು ಇದ್ದರು.