ಗ್ರಾಮಸ್ಥರ ದುರ್ಮರಣಕ್ಕೆ ಕೊನೆ ಎಂದು….?

487

ಬಳ್ಳಾರಿ,/ಹೊಸಪೇಟೆ:ಬಳಿಯ ರಾಷ್ಟ್ರೀಯ ಹೆದ್ದಾರಿ-13 ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ನಿರ್ಮಾಣ ಮಾಡಿದ್ದೇನೋ ಸರಿ. ಆದ್ರೆ, ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಬಳಿ ಜೆಎಂಆರ್ ಸಂಸ್ಥೆಯವರು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದ ರಿಂದ ಇದುವರೆಗೂ ಹತ್ತಕ್ಕೂ ಹೆಚ್ಚು ಜನ ವಾಹನಗಳಿಗೆ ಸಿಲುಕಿ ಭೀಕರವಾಗಿ ಸಾವಿಗೀಡಾಗಿದ್ದಾರೆ. ಇದಕ್ಕೆ ಕೊನೆ ಎಂದು? ಅಂತ ಗ್ರಾಮಸ್ಥರು ಆತಂಕದಿಂದ ಆಡಳಿತ ವ್ಯವಸ್ಥೆಗೆ ಪ್ರಶ್ನೆ ಮಾಡತ್ತಿದ್ದಾರೆ. ಇದಕ್ಕೆ ಉತ್ತರ ನೀಡುವವರು ಯಾರು? ಎನ್ನೋದೆ ಇದೀಗ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಹೌದು…

ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ-13ರ ಬಳಿ ಇರುವ ಶಹಪುರ ಗ್ರಾಮದ ಜನರು ತಮ್ಮ ಪ್ರತಿಯೊಂದು ದೈನಂದಿನ ಚಟುವಟಿಕೆಗಳಿಗೂ ಪಕ್ಕದ ಗ್ರಾಮಗಳಾದ ಹಿಟ್ನಾಳ, ಅಗಳಕೇರಿ, ಹೊಸಹಳ್ಳಿ, ಬೂದಗುಂಪಾಗಳಿಗೆ ತೆರಳಬೇಕು. ಇಲ್ಲಿನ ನೂರಾರು ವಿದ್ಯಾರ್ಥಿಗಳೂ ಸಹ ಸದರಿ ರಸ್ತೆಯನ್ನು ದಾಟಿಕೊಂಡು ಹಿಟ್ನಾಳ ಶಾಲೆಗೆ ಹೋಗಬೇಕು. ಜೆಎಂಆರ್ ಕಂಪನಿ ಗ್ರಾಮದ ಬಳಿ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಪದೇ ಪದೇ ಇಲ್ಲಿ ರಸ್ತೆ ಅಪಘಾತಗಳು ಸಂಭವಿಸಿ ಅನೇಕರು ದಾರುಣವಾಗಿ ಸಾವಿಗೀಡಾಗಿದ್ದಾರೆ.  ಹೀಗೆ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿ ಜನರು ರೋಧಿಸುತ್ತಿದ್ದಾರೆ.

*ಇದುವರೆಗೆ ಸಾವಿಗೀಡಾದವರು:*

ಶಹಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ–13 ರಲ್ಲಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ ಹತ್ತಕ್ಕೂ ಹೆಚ್ಚು ದಾಟಿದೆ. ಇಷ್ಟಾದರೂ ರಸ್ತೆ ನಿರ್ಮಿಸಿದ ಜೆಎಂಆರ್ ಕಂಪನಿಗೆ ಅಮೂಲ್ಯ ಜೀವಗಳ ಮೌಲ್ಯದ ಅರಿವು ಇಲ್ಲದಾಗಿದೆ. ಘಟನೆ ಸಂಭವಿಸಿದಾಗೊಮ್ಮೆ ಗ್ರಾಮಸ್ಥರು ರಸ್ತೆ ತಡೆ, ಪ್ರತಿಭಟನೆ ಮತ್ತು ಧರಣಿ ನಡೆಸಿ ರೋಡ್ ಬ್ರೇಕರ್ ಅಳವಡಿಕೆಗೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾತ್ರ ತಾತ್ಕಾಲಿಕ ಭರವಸೆ ನೀಡಿ ಮರೆತು ಬಿಡುತ್ತಿದ್ದಾರೆ. ಇದನ್ನ ಕೇಳಲು ಹೋದರೆ ಕಾನೂನಿನ ಸಬೂಬು ನೀಡುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೊಪ್ಪಳ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಜೆಎಂಆರ್ ಕಂಪನಿಯ ನಿರ್ಲಕ್ಷಕ್ಕೆ ಹಲವು ಜನರು ಜೀವ ಕಳೆದುಕೊಂಡು, ಶಹಪುರ ಗ್ರಾಮಸ್ಥರು ನಲುಗಿ ಹೋಗುತ್ತಿದ್ದಾರೆ.

ಈ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಪಘಾತದಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಈಗಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ನಿಂಗಪ್ಪ ಚೌಡ್ಕಿ(60), ಕಂಬಳಿ ಪಂಪಾಪತಿ(24), ಯಮನಮ್ಮ ಕುರಿ(45) ಬಂಡಿಕುಂಟಿ ಯಮನಪ್ಪ(30), ಸುಣಗಾರ ಹನುಮಂತಪ್ಪ(60), ಕಮಲಾಪುರ ಮಲ್ಲೇಶ(25), ಹನುಮಪ್ಪ ಬನ್ನಿಹಟ್ಟಿ(30) ಬೀರಪ್ಪ ಹಳ್ಳಿಗುಡಿ(25) ಬಿಲಂಕರ್ ತುಕಾರಾಮ್(50) ಮತ್ತು ಮಂಜುನಾಥ್ ಹೊಸಪೇಟೆ(34), ಅಗಳಕೇರಿಯ ಖಾಜಾ ಹುಸೇನ್(35), ಸುಂಕವ್ವ(12) ಸವಿತಾ(23) ಇವರು ವಾಹನಗಳಿಗೆ ಸಿಲುಕಿ ಭೀಕರವಾಗಿ ದುರ್ಮರಣಕ್ಕೀಡಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬದ ಸದಸ್ಯರು ದಿಕ್ಕುಗಾಣದಾಗಿದ್ದಾರೆ. ಇನ್ನು ಗ್ರಾಮದ ಅನೇಕ ಹಸು, ಕರು, ಎಮ್ಮೆ, ಮೇಕೆ, ಕುರಿಗಳು ಸಹ ಸಾವನ್ನಪ್ಪಿವೆ. ಫಕಿರವ್ವ ನಾಯ್ಕಲ್(60) ಅವರು ಸಹ ವಾಹನ ಅಪಘಾತಕ್ಕೆ ಸಿಲುಕಿ ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ತೀರಾ ಇತ್ತೀಚೆಗೆ ಅಕ್ಬರ್ ಅವರು ಸಹ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆಯ ದಿನ ಬಸವಲಿಂಗಪ್ಪ(55) ಎನ್ನುವ ವ್ಯಕ್ತಿ ಕೂಡ ದಾರುಣವಾಗಿ ಸಾವಿಗೀಡಾಗಿ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಬ್ಯಾರಿಕೇಡ್ ಹಾಕುವಾಗ ಸುರೇಶ್ ಪಾಟೀಲ್ ಅವರೂ ಸಹ ಅಪಘಾತಕ್ಕೆ ಸಿಲುಕಿ ಪಾರಾದ ಘಟನೆ ನಡೆದಿದೆ.

*ಸರ್ವೀಸ್ ರಸ್ತೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ:*

ಹೀಗೆ ಕಳೆದ ಕೆಲ ವರ್ಷಗಳಲ್ಲಿ ಅನೇಕರು ಸಾವಿಗೀಡಾಗಿದ್ದರೂ ಕೊಪ್ಪಳ ಜಿಲ್ಲಾಡಳಿತ ಗ್ರಾಮಸ್ಥರ ದಾರುಣತೆಗೆ ಮರುಗುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಗ್ರಾಮದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಜೆಎಂಆರ್ ಕಂಪನಿ ಸಾವಿಗೀಡಾದವರ ಕುಟುಂಬದವರಿಗೆ ಪರಿಹಾರ ನೀಡುತ್ತಿಲ್ಲ. ಶಾಸಕರು ಮತ್ತು ಸಂಸದರು ಕೂಡ ಗ್ರಾಮಸ್ಥರ ನೋವಿಗೆ ಸ್ಪಂದಿಸುತ್ತಿಲ್ಲ. ತಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳುವುದು? ಅಂತ ಜನರು ಭ್ರಷ್ಟ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹಾಗೂ ಆಕ್ರೋಶಭರಿತರಾಗಿದ್ದಾರೆ.

ಇನ್ನಾದರೂ ಗ್ರಾಮಸ್ಥರ ಹಿತದೃಷ್ಟಿಯಿಂದ ಕೊಪ್ಪಳ ಜಿಲ್ಲಾಡಳಿತ ಕೂಡಲೇ ಸರ್ವೀಸ್ ರಸ್ತೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ಮಾಡುವುದೇ? ಕಾದು ನೋಡಬೇಕಿದೆ.

*ಹೋರಾಟಕ್ಕೆ ಸಿದ್ಧತೆ:*

ಹೀಗೆ ಪದೇ ಪದೇ ರಸ್ತೆ ಅಪಘಾತದಿಂದ ತಮ್ಮವರನ್ನು ಕಳೆದುಕೊಂಡ ಆಕ್ರೋಶದಲ್ಲಿ ಗ್ರಾಮಸ್ಥರು ಶಹಪುರ ಟೋಲ್ ಗೇಟ್‍ಗೆ ಮುತ್ತಿಗೆ ಹಾಕುವ ಸಿದ್ಧತೆ ನಡೆಸಿದ್ದಾರೆ. ನೂರಾರು ವಿದ್ಯಾರ್ಥಿಗಳೊಂದಿಗೆ ಜೆಎಂಆರ್ ಕಂಪನಿಯ ಮುಖ್ಯಸ್ಥರಿಗೆ ಧಿಕ್ಕಾರ ಹಾಕಲಿದ್ದಾರೆ. ಒಂದುವೇಳೆ ಗ್ರಾಮಸ್ಥರ ಬೇಡಿಕೆ ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ಸರಣಿ ಉಪವಾಸ ಸತ್ಯಾಗ್ರಹ, ಧರಣಿ, ರಸ್ತೆ ತಡೆ ನಡೆಸಿ ಸರ್ಕಾರದ ಕಣ್ಣು ತೆರೆಸಲಿದ್ದಾರೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನೂ ಸಹ ಗ್ರಾಮದ ಮುಖಂಡರಾದ ಸುರೇಶ್ ಪಾಟೀಲ್, ಮಂಜುನಾಥ್ ರಾಟಿ, ನಿಂಗಪ್ಪ, ಪಂಪಯ್ಯ ಹಿರೇಮಠ ಇನ್ನಿತರರು ನೀಡಿದ್ದಾರೆ.