ಮಾತೃಪೂರ್ಣ ಯೋಜನೆಗೆ ಚಾಲನೆ..

268

ಶಿವಮೊಗ್ಗ :ಜಿಲ್ಲೆಯ 26 ಸಾವಿರ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಊಟ.
ಮಾತೃಪೂರ್ಣ ಯೋಜನೆ ಚಾಲನೆಗೆ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ.

ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಊಟವನ್ನು ಒದಗಿಸುವ ಮಾತೃಪೂರ್ಣ ಯೋಜನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಚಾಲನೆ ನೀಡಿದರು.

ನಗರದ ಶೇಷಾದ್ರಿಪುರ ಅಂಗನವಾಡಿ ಆವರಣದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಊಟವನ್ನು ಬಡಿಸುವ ಮೂಲಕ ಸಚಿವರು ಯೋಜನೆಗೆ ಸಾಂಕೇತಿಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅವರ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಪೌಷ್ಟಿಕ ಆಹಾರ ನೀಡುವುದು ಈ ಯೋಜನೆಯ ಗುರಿಯಾಗಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಗತಿಪರ ಹಾಗೂ ಕ್ರಾಂತಿಕಾರಕ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಟಾನಗೊಳಿಸುತ್ತಿದೆ. ತಾಯಿ ಮತ್ತು ಮಗು ಆರೋಗ್ಯಪೂರ್ಣವಾಗಿರಬೇಕು ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಮಾತ್ರವಲ್ಲದೆ ಬಾಣಂತಿಯರಿಗೂ ಆರು ತಿಂಗಳ ಕಾಲ ಅನ್ನ, ಸಾಂಬಾರು, ಪಲ್ಯ, ಬೇಯಿಸಿದ ಮೊಟ್ಟೆ, ಕಬ್ಬಿಣಾಂಶವುಳ್ಳ ಚಿಕ್ಕಿಯನ್ನು ತಿಂಗಳಿಗೆ 25ದಿನ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳೆಕೆ ಬರಿಸಿದ ಕಾಳನ್ನು ನೀಡಲಾಗುವುದು. ಇದರೊಂದಿಗೆ ಕಬ್ಬಿಣಾಂಶದ ಮಾತ್ರೆಯನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.

ತಾಯಿಂದಲೇ ಸಮಾಜದ ನಿರ್ಮಾಣವಾಗಿದ್ದು, ಅಂತಹ ತಾಯಿ ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಸಮಾಜ ಆರೋಗ್ಯ ಪೂರ್ಣವಾಗಿರಲು ಸಾಧ್ಯ. ಸಂತುಲಿತ ಆಹಾರದ ಮೂಲಕ ತಾಯಿ ಮಗುವಿಗೆ ಪೌಷ್ಟಿಕ ಆಹಾರ ದೊರಕಲಿದೆ. ಇದರ ಪ್ರಯೋಜನ ಎಲ್ಲಾ ಅರ್ಹರಿಗೂ ದೊರೆಯುವಂತೆ ನೋಡಿಕೊಳ್ಳಬೇಕು. ಆಹಾರ ಸಿದ್ಧಪಡಿಸುವುದರಿಂದ ಹಿಡಿದು ಬಡಿಸುವವರೆಗೂ ಶುಚಿತ್ವವನ್ನು ಕಾಪಾಡಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.

ಜಿಲ್ಲೆಯ ಫಲಾನುಭವಿಗಳು: ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯನ್ನು 2439ಅಂಗನವಾಡಿಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ನಮೂದಿಸಲಾಗಿರುವ 13741ಗರ್ಭಿಣಿಯರು ಹಾಗೂ 12549ಬಾಣಂತಿಯರು ಸೇರಿ ಒಟ್ಟು 26290ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ಊಟಕ್ಕೆ ಒಟ್ಟು 21ರೂ. ವೆಚ್ಚ ಬೀಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಪ್ರತಿ ದಿನ ಊಟದಲ್ಲಿ 2580ಕ್ಯಾಲೊರಿ, 78ಪ್ರೊಟೀನ್ ಹಾಗೂ 1200 ಮಿ.ಗ್ರಾಂ ಕ್ಯಾಲ್ಸಿಯಂ ಸೇವಿಸುವುದು ಅಗತ್ಯವಿದೆ. ಮಾತೃಪೂರ್ಣ ಯೋಜನೆಯಲ್ಲಿ ಒಂದು ಬಿಸಿ ಊಟದ ಮೂಲಕ 1198 ಕ್ಯಾಲೊರಿ, 37ಪ್ರೊಟೀನ್ ಹಾಗೂ 578 ಮಿ.ಗ್ರಾಂ ಕ್ಯಾಲ್ಸಿಯಂ ಅಂಶಗಳು ದೊರೆಯಲಿದೆ. ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ 100ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸುವುದನ್ನು ಖಾತ್ರಿಪಡಿಸಬೇಕು. ಅಂಗನವಾಡಿಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಕಡ್ಡಾಯವಾಗಿ ಊಟದ ಬಳಿಕ ಸೇವಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸಿ, ಕಡಿಮೆ ತೂಕದ ಮಕ್ಕಳ ಜನನ ಹಾಗೂ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡುವುದು, ಈ ಮೂಲಕ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಅಂಗನವಾಡಿಗಳಲ್ಲಿ ಗರ್ಭಿಣಿಯರ ನೋಂದಣಿ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾನ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.