ಕೊಚ್ಚಿ ಹೋದ ರಸ್ತೆ‌.!?

421

ಚಿಕ್ಕಬಳ್ಳಾಪುರ/ಗುಡಿಬಂಡೆ: ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಯಿಂದಾಗಿ ಹಂಪಸಂದ್ರ ಕೆರೆಯ ಬಳಿಯ ರಸ್ತೆ ಕೊಚ್ಚಿ ಹೋಗಿದ್ದು, ಅದೇ ಪಂಚಾಯತಿಯ ಆದಿನಾರಾಯಣಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿದ್ದ ಸುಮಾರು 10ಸಾವಿರ ಕೋಳಿ ಮರಿಗಳು ಹಾಗೂ 50 ಚೀಲಾ ಕೋಳಿ ಆಹಾರ ನಾಶವಾಗಿದೆ.
ಸತತ ಬರಗಾಲಕ್ಕೆ ತುತ್ತಾಗಿರುವ ಗುಡಿಬಂಡೆ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಕೆರೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಅ.9 ಸೋಮವಾರ ರಾತ್ರಿ ಬಿದ್ದ ಮಳೆಗೆ ಹಂಪಸಂದ್ರ ಕೆರೆಯ ತಿರುವುನಲ್ಲಿರುವ ರಸ್ತೆ ಕೊಚ್ಚಿ ಹೋಗಿದೆ. ಜೊತೆಗೆ ಆದಿನಾರಾಯಣಹಳ್ಳಿ ಗ್ರಾಮದ ಅಶ್ವತ್ಥಮ್ಮ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿದ್ದ 10 ಸಾವಿರ ಮರಿಗಳು ಹಾಗೂ 50 ಮೂಟೆ ಕೋಳಿ ಆಹಾರ ಮಳೆಗೆ ಬಲಿಯಾಗಿದ್ದು, ಸುಮಾರು 5.20 ಲಕ್ಷದಷ್ಟು ನಷ್ಟವಾಗಿದೆ ಎನ್ನಲಾಗಿದೆ. ಇನ್ನೂ ಈ ಸಂಬಂಧ ತಹಸೀಲ್ದಾರ್ ಸಿಗ್ಬತ್ತುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಇಲಾಖೆ ಸುತ್ತೋಲೆಯ ಪ್ರಕಾರ ನಷ್ಟ ಹೊಂದಿದ ರೈತರಿಗೆ ಸಿಗಬೇಕಾದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಸುಮಾರು 5-6 ವರ್ಷಗಳಿಂದ ತುಂಬದ ದೊಡ್ಡನಂಚರ್ಲು ಕೆರೆ, ತಿರುಮಣಿ ಕೆರೆಗಳು ತುಂಬಿ ಕೋಡಿ ಹರಿಯುತ್ತಿದೆ. ಹಂಪಸಂದ್ರ ಕೆರೆ ಹಾಗೂ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ತುಂಬುವ ಹಂತದಲ್ಲಿದೆ.

ಒಂದು ಕಡೆ ಸಂತಸ ಒಂದು ಕಡೆ ನಷ್ಟ: ಮಳೆಯಿಂದಾಗಿ ತುಂಬಿ ವರ್ಷಗಳು ಕಳೆದ ಕೆರೆಗಳು ತುಂಬುತ್ತಿರುವ ಸಂತಸದಲ್ಲಿ ಕೆಲವು ರೈತರು ಹಾಗೂ ಜನತೆಯಿದ್ದರೇ, ಉಳಿದಂತೆ ರೈತರು ಬೆಳೆದ ಬೆಳೆ ರೈತನ ಕೈಗೆ ಸೇರುವ ವೇಳೆ ಮಳೆಯಿಂದಾಗಿ ನಾಶವಾಗುವ ಭೀತಿಯಲ್ಲಿ ರೈತರಿದ್ದಾರೆ.