ಜಿಲ್ಲೆ,ಜಿಲ್ಲೆಯಲ್ಲೂ ಉಚಿತ ಸಾಮೂಹಿಕ ವಿವಾಹ..!

330

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಾಜ್ಯದ 224 ಕ್ಷೇತ್ರಗಳಲ್ಲೂ ಉಚಿತ ಸಾಮೂಹಿಕ ಮದುವೆ ಆಯೋಜನೆ-ಬಿ.ಶ್ರೀರಾಮುಲು

ಬಳ್ಳಾರಿ /ಬಳ್ಳಾರಿ:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಾರೆ. ಆಗ ರಾಜ್ಯದ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಸರ್ಕಾರದಿಂದಲೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿ, ಇದಕ್ಕಾಗಿಯೇ ಓರ್ವ ಮಂತ್ರಿ ಯನ್ನು ನಿಯೋಜಿಸಲಾಗುವುದೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸದರಾದ ಬಿ.ಶ್ರೀರಾಮುಲು ಹೇಳಿದರು.

ಬಜೆಪಿ ಜಿಲ್ಲಾ ಘಟಕ ಹಾಗೂ ಸಂಸದ ಬಿ.ಶ್ರೀರಾಮುಲು ನೇತೃತ್ವದಲ್ಲಿ ಆಯೋಜಿಸಿದ್ದ 20ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ಮದುವೆ ಎನ್ನುವುದು ಭಾವನಾತ್ಮಕ ಸಂಬಂಧ. 1999 ರಲ್ಲಿಯೇ ನಾವು ಗೆಳೆಯ ರೊಂದಿಗೆ ಕೂಡಿ ದಾನಿಗಳ ನೆರವಿನೊಂದಿಗೆ ಬಡವರ ಮಕ್ಕಳ ಮದುವೆ ಮಾಡುತ್ತಿದ್ದೇವೆ. ಇದು ಸ್ವಾರ್ಥದ ಮತ್ತು ರಾಜಕಾರಣ ಮಾಡುವ ಕಾರ್ಯಕ್ರಮವಲ್ಲ. ಈ ರೀತಿಯ ಸಂಕಲ್ಪ ನಮಗೆ ನೀಡಿದ್ದು ದೈವೇಚ್ಛೆಯಾಗಿದೆ. ಅಕ್ಕಿ, ಶಾಮಿ ಯಾನ, ಮಂಗಳ ಸೂತ್ರ, ಬಟ್ಟೆ, ಊಟೋಪ ಚಾರ ಎಲ್ಲವೂ ದಾನಿಗಳ ಕೊಡುಗೆ. ಇದುವರೆಗೆ ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ 40 ಸಾವಿರ ಜೋಡಿಗಳಿಗೆ ಮದುವೆ ಮಾಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಟ್ಟು 3.50 ಕೋಟಿ ಜನರು ಇಂದಿಗೂ ಬಡತನದಲ್ಲಿಯೇ ಜೀವಿ ಸುತ್ತಿದ್ದಾರೆ. ಅಂತಹ ಮಕ್ಕಳಿಗೆ ಸಾಮೂಹಿಕ ವಿವಾಹ ಏರ್ಪಡಿಸಿದರೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಎಸ್‍ಸಿ, ಎಸ್‍ಟಿ ವರ್ಗದ ಜೋಡಿಗೆ ರೂ.50 ಸಾವಿರ, ಸಾಮಾನ್ಯ ವರ್ಗಕ್ಕೆ ರೂ.10 ಸಾವಿರ ಹಣ ನೀಡಲಾಗುತ್ತದೆ ಎಂದರು.

*ಎಷ್ಟಾದರೂ ಹಡೀರಿ-ಮೊದಲು ದುಡೀರಿ*

20ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಪೂಜ್ಯ ಕಲ್ಯಾಣ ಶ್ರೀಗಳು ನೂತನ ವಧುವರರಿಗೆ ಆಶೀರ್ವಚನ ನೀಡಿ, ಇಂದಿನ ದಿನಗಳಲ್ಲಿ ಕುಟುಂಬ ನಿರ್ವಹಣೆ ಬಹಳ ಕಷ್ಟ. ಹೊಸದಾಗಿ ಮದುವೆ ಆಗುವವರು ಯಾವುದೇ ಕಾರಣಕ್ಕೂ ಉಭಯ ಕುಟುಂಬಗಳ ಹಿರಿಯರನ್ನು ಗೌರವಿಸಬೇಕು. ದೇಹದಲ್ಲಿ ಬಂಗಾರದ ಆಭರಣಗಳನ್ನು ಧರಿಸಿದರೆ ಶೋಭೆ ಎನಿಸುವುದಿಲ್ಲ. ನಿಮ್ಮ ಗುಣವೇ ಬಂಗಾರವಾಗಬೇಕು. ಮಕ್ಕಳನ್ನು ಎಷ್ಟಾದರೂ ಹಡೀರಿ. ಮೊದಲು ಕುಟುಂಬ ನಿರ್ವಹಣೆಗೆ ಬೇಕಾಗುವಷ್ಟು ದುಡಿಯುವುದನ್ನು ರೂಢಿಸಿಕೊಳ್ಳಿ ಎಂದರು. ಅನೇಕ ರಾಜಕಾರಣಿಗಳು ಬಡವರ ಬಂಧು ಅಂತ ಟೈಟಲ್ ಹಾಕಿಕೊಳ್ಳುತ್ತಾರೆ. ಹಾಗೆ ನೋಡಿದರೆ ಯಾರೂ ಬಡವರ ಬಂಧು ಆಗಿರುವುದಿಲ್ಲ. ಬಡವರ ರಕ್ತ ಹೀರುವ ರಾಜಕಾರಣಿಗಳಾಗಿರುತ್ತಾರೆ. ಬಿ.ಶ್ರೀರಾಮುಲು ನಿಜಕ್ಕೂ ಬಡವರ ಬಂಧುವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎಷ್ಟೇ ಒತ್ತಡ, ಕೋಪ ಇದ್ದರೂ ತೋರಗೊಡದೇ ಶಾಂತ ಚಿತ್ತರಾಗಿ ಜನರ ಸೇವೆ ಮಾಡುವ ಅವರು ಕೇವಲ ಬಳ್ಳಾರಿಗೆ ಮಾತ್ರವಲ್ಲ, ಇಡೀ ಭಾರತಕ್ಕೆ ಶ್ರೀರಾಮುಲು ಆಗಿದ್ದಾರೆ ಎಂದರು.

ಕಂಬಾಳಿ ಮಠ, ಮರಿಯಮ್ಮನಹಳ್ಳಿ ಮಠ, ಹಂಪಸಾಗರ ಶ್ರೀಗಳು ಸಹ ಮಾತನಾಡಿ ಸಾಧನೆಯಿಂದ ಕೂಡಿದ ಬದುಕು ನವ ಜೋಡಿಗಳದ್ದಾಗಲಿ ಎಂದರು.

ಶಾಸಕರಾದ ಪಿ.ರಾಜೀವ್ ಕುಡಚಿ ಮತ್ತು ಟಿಎಚ್ ಸುರೇಶ್ ಬಾಬು ಅವರು ಮಾತನಾಡಿ, ಎಂಥದೇ ಕಷ್ಟದಲ್ಲೂ ಬಿ.ಶ್ರೀರಾಮುಲು ಪ್ರತಿವರ್ಷ ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಸೋಜಿಗ. ಅವರಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ನ್ಯಾಯ ಸಿಗುತ್ತಿದೆ. ಬಡವರ ಕಣ್ಣೀರು ಕರಗುತ್ತಿದೆ. ಅಂತಹ ನಾಯಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಧ್ವಜ ಹಾರಿಸುವುದನ್ನು ರಾಜ್ಯದ ಜನತೆ ನಿರೀಕ್ಷಿಸುತ್ತಿದೆ ಎಂದರು.

ಮಾಜಿ ಸಂಸದೆ ಜೆ.ಶಾಂತಾ, ಮಾಜಿ ಶಾಸಕರಾದ ನೇಮಿರಾಜ ನಾಯಕ, ಮೃತ್ಯುಂಜಯ ಜಿನಗಾ, ಚಂದ್ರಾ ನಾಯಕ, ಎಂಎಸ್ ಸೋಮಲಿಂಗಪ್ಪ,  ಎನ್ ವೈ ಗೌಡರ್, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಮೊದಲಾದವರು ಮಾತನಾಡಿ, ಸಾಮೂಹಿಕ ವಿವಾಹ ನಡೆಸುವುದು ಸುಲಭ ಸಾಧ್ಯವಲ್ಲ. ಸಾಲದ ಬಾಧೆಯಿಂದ ನರಳುವ ಕುಟುಂಬಗಳಿಗೆ ಬಿ.ಶ್ರೀರಾಮುಲು ಭರವಸೆಯಾಗಿದ್ದಾರೆ. ಇಂತಹ ಮದುವೆಗಳು ನಿರಂತರ ಮುಂದುವರಿಯಲಿ. ಸಾಮೂಹಿಕ ಮದುವೆಯಲ್ಲಿ ಜೋಡಿಯಾಗುವ ದಂಪತಿಗಳ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಬಳಿಕ ಶುಭ ಮುಹೂರ್ತದಲ್ಲಿ ಸಹಸ್ರಾರು ಜನರ ಶುಭಾಶಯಗಳ ನಡುವೆ 60 ಜೋಡಿಗಳ ಮಾಂಗಲ್ಯ ಧಾರಣೆ ನಡೆಯಿತು. ಇದೇವೇಳೆ ಸಾಮೂಹಿಕ ವಿವಾಹಕ್ಕೆ ಮಂಗಳಸೂತ್ರ ನೀಡಿದ ಸಿಂಧನೂರಿನ ಜನ್ನು ದಂಪತಿಗಳಿಗೆ ಬಿ.ಶ್ರೀರಾಮುಲು ಅಭಿನಂದಿಸಿದರು.

ಮಾಜಿ ಸಂಸದ ಸಣ್ಣ ಫಕ್ಕಿರಪ್ಪ, ಬಿಜೆಪಿ ರೈತ ಮೋರ್ಚ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನ ಗೌಡ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ನೂರ್ ಬಾಷಾ, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜುಲು, ಎಸ್.ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ.ಶಶಿಕಲಾ, ಬಿಜೆಪಿ ಮುಖಂಡರಾದ ಹೆಚ್.ಹನುಮಂತಪ್ಪ, ಕೆಎಸ್ ದಿವಾಕರ್, ಓಬಳೇಶ್, ಗುತ್ತಿಗನೂರು ವಿರೂಪಾಕ್ಷಗೌಡ, ರುದ್ರಗೌಡ, ಇಬ್ರಾಹಿಂ, ಗುಜರಿ ಅಜೀಜ್, ಗೋನಾಳ್ ರಾಜಶೇಖರಗೌಡ, ಜೆರಾಲ್ಡ್, ಶಾಮ್, ಶಿವಕುಮಾರ್, ಕೆಎಸ್ ಅಶೋಕ್, ಬಾದುಲ್ಲಾ, ವೀರಶೇಖರರೆಡ್ಡಿ ಸೇರಿದಂತೆ ಹಲವು ಮುಖಂಡರು ವೇದಿಕೆ ಮೇಲೆ ಇದ್ದರು.ಬಿಜೆಪಿ ಹಿರಿಯ ಮುಖಂಡ ಡಾ.ಎಸ್‍ಜೆವಿ ಮಹಿಪಾಲ್ ಸ್ವಾಗತಿಸಿದರು.

ರಮೇಶ್ ನಿರೂಪಿಸಿದರು.

ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಸಮಿತಿ ಅಧ್ಯಕ್ಷ ಸಂಜಯ್ ವಿ.ಬೆಟಗೇರಿ ವಂದಿಸಿದರು.  ಮದುವೆ ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಪಂಚಭಕ್ಷ ಪರಮಾನ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಮಿತಿ ಸಂಚಾಲಕ ಮಹೇಶ್ ರೆಡ್ಡಿ, ಪ್ರಸಾದ್ ಮತ್ತು ದೇವಿನಗರ ರಾಮು ಸೇರಿದಂತೆ ಅನೇಕ ಗೆಳೆಯರು ಸಾಮೂಹಿಕ ವಿವಾಹದ ಯಶಸ್ಸಿಗೆ ಸಹಕರಿಸಿದರು.