ನೀರು ತಡೆಯುವಂತೆ ಒತ್ತಾಯಿಸಿ ಪ್ರತಿಭಟನೆ.

362

*ಆತ್ಮಹತ್ಯೆಗೆ ಪ್ರಯತ್ನಿಸಿದ ರೈತರು
*ರಾಜಕೀಯ ಒತ್ತಡಗಳಿಗೆ ಮಣಿದ ಅಧಿಕಾರಿ ವರ್ಗ: ರೈತರ ಆರೋಪ.

ಚಿಕ್ಕಬಳ್ಳಾಪುರ/ ಗುಡಿಬಂಡೆ: ಪಟ್ಟಣದ ಹೊರವಲಯದ ಅಮಾನಿ ಬೈರಸಾಗರ ಕೆರೆಯ ನೀರು ವಾಟದಹೊಸಹಳ್ಳಿ ಕೆರೆಗೆ ತೂಬಿನ ಮೂಲಕ ನೀರು ಬಿಡುತ್ತಿದ್ದು ಅದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ತಾಲ್ಲೂಕಿನ ರೈತ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮೈಸೂರು ಮಹಾರಾಜರು ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಿಂದ ವಾಟದಹೊಸಹಳ್ಳಿ ಕೆರೆಗೆ ನೀರು ಪೂರೈಕೆಯಾಗಬೇಕೆಂಬ ಒಪ್ಪಂದವಾಗಿತ್ತು. ಆದರೆ ಅ.೧೬ ಸೋಮವಾರದಂದು ವಾಟದಹೊಸಹಳ್ಳಿ ಗ್ರಾಮದಿಂದ ಸುಮಾರು ೨೦೦ ಮಂದಿ ಬಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲು ಶುರು ಮಾಡಿದ ತಕ್ಷಣವೇ ಗುಡಿಬಂಡೆ ತಾಲ್ಲೂಕಿನವರು ಕೂಡ ಪ್ರತಿಭಟನೆಗೆ ಮುಂದಾದರು. ಈ ವೇಳೆ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿದ ಉಪವಿಭಾಗಾಧಿಕಾರಿ ಶಿವಸ್ವಾಮಿ ಹಾಗೂ ತಹಸೀಲ್ದಾರ್ ಸಿಗ್ಬತ್ತುಲ್ಲಾ ನೇತೃತ್ವದಲ್ಲಿ ಎರಡು ಗುಂಪುಗಳ ಜೊತೆ ಸುಧೀರ್ಘ ಕಾಲ ಸಂವಾದ ನಡೆಸಿ ವಾಟದಹೊಸಹಳ್ಳಿ ಕೆರೆಗೆ ಇಪ್ಪತ್ತಮೂರು ಅಡಿ ನೀರಿಗಿಂತ ಮೇಲ್ಪಟ್ಟ ನೀರು ವಾಟದಹೊಸಹಳ್ಳಿ ಕೆರೆಗೆ ನೀರು ಬಿಡಲು ಒಪ್ಪಿಸಲಾಯಿತು. ಅದರಂತೆ ನೀರು ಬಿಡಲಾಗಿ ವಾಟದಹೊಸಹಳ್ಳಿ ಕೆರೆಯಲ್ಲಿ  ಸುಮಾರು ೧೦ ಅಡಿ ನೀರು ಶೇಖರಣೆಯಾಗಿದೆ.

ಆದರೆ ಕೆರೆಯಲ್ಲಿನ ನೀರನ ಶೇಖರಣಾ ಮಟ್ಟ ಈಗಾಗಲೇ ೨೩ ಅಡಿಗಿಂತ ಕಡಿಮೆಯಾಗಿದ್ದರು ಸಹ ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಆಮಿಷಕ್ಕೆ ಒಳಗಾಗಿಯೋ ಅಥವಾ ಜನಪ್ರತಿನಿಧಿಗಳ ಭಯದಿಂದಲೋ ನೀರನ್ನು ಇನ್ನೂ ಪೂರೈಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಧರಣಿ ಕೂತಿದ್ದು, ಕೂಡಲೇ ನೀರನ್ನು ನಿಲ್ಲಿಸದಿದ್ದರೇ, ಒಬ್ಬೊಬ್ಬರಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಇದಕ್ಕೆಲ್ಲಾ ಕಾರಣ ಕಂದಾಯ, ನೀರಾವರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದೇ ವೇಳೆ ನೀರು ಪೂರೈಕೆ ಸ್ಥಗಿತಗೊಳಿಸದೇ ಇದ್ದ ಕಾರಣ ಗುಡಿಬಂಡೆ ಪಟ್ಟಣದ ಖಲೀಲ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸದರೇ, ಮತ್ತೊಂದೆಡೆ ಈಜು ಬರದ ಗೋವಿಂದಪ್ಪ ಎಂಬುವವರು ಕೂಡ ಕೆರೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಸನ್ನಿವೇಶವೂ ಸಹ ನಡೆಯಿತು.

 

ಸ್ಥಳಕ್ಕೆ ಬಾರದ ಎ.ಸಿ: ಇಷ್ಟೇಲ್ಲಾ ಪ್ರತಿಭಟನೆ ಆತ್ಮಹತ್ಯೆ ಯತ್ನದಂತಹ ಘಟನೆಗಳು ನಡೆದರೂ ಕೂಡ ಸ್ಥಳಕ್ಕೆ ಉಪವಿಭಾಗಾಧಿಕಾರಿ ಶಿವಸ್ವಾಮಿ ಸುಳಿಯಲೇ ಇಲ್ಲ. ಸಂಧಾನ ಮಾಡಲು ಬಂದಂತಹ ಅಧಿಕಾರಿಗಳು ಈಗ ಕೆಲವೊಂದು ರಾಜಕೀಯ ಒತ್ತಡಗಳಿಂದ ಇತ್ತ ಸುಳಿಯದೇ ಇರುವುದು ರೈತರ ಆಕ್ರೋಷಕ್ಕೆ ಮತಷ್ಟು ಕಾರಣವಾಯಿತು.

ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಸ್ಥಗಿತಗೊಳಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಸೋಮವಾರ ಮತ್ತೇನಾದರೂ ನೀರು ವಾಟದಹೊಸಹಳ್ಳಿ ಕೆರೆಗೆ ಬಿಟ್ಟಿದ್ದೇ ಆದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು  ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಮುನಿರೆಡ್ಡಿ ಹಾಗೂ ಸಬ್ ಇನ್ಸಪೆಕ್ಟರ್ ಶೇಷಾದ್ರಿ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ನೀಡಿದ್ದರು.

ಪ್ರತಿಭಟನೆಯಲ್ಲಿ ಪ.ಪಂ. ಸದಸ್ಯರಾದ ದ್ವಾರಕಿನಾಥನಾಯ್ಡು, ರಾಜಣ್ಣ, ರೈತ ಮುಖಂಡರಾದ ಹೆಚ್.ಪಿ.ರಾಮನಾಥ್, ವರದರಾಜು, ಮಹೇಶ್, ರಾಮಾಂಜಿನಪ್ಪ ಸೇರಿದಂತೆ ಹಲವರು ಇದ್ದರು.