ಗಾಳಿಪಟ ಉತ್ಸವಕ್ಕೆ ಗಣ್ಯರಿಂದ ಚಾಲನೆ….

324

ಬಳ್ಳಾರಿ /ಹೊಸಪೇಟೆ : ಹಂಪಿ ಉತ್ಸವ ನಿಮಿತ್ತ ಗಾಳಿಪಟ ಉತ್ಸವಕ್ಕೆ ಚಾಲನೆ
ಬಾನಂಗಳದಲ್ಲಿ ಬಣ್ಣಬಣ್ಣದ ಗಾಳಿಪಟಗಳ ಚಿತ್ತಾರ

ಹಂಪಿ ಉತ್ಸವದ ನಿಮಿತ್ತ ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವಕ್ಕೆ ಕಾರ್ಮಿಕ,ಕೌಶಲ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಗಾಳಿಪಟವೊಂದನ್ನು ಗಗನದತ್ತ ಆರಿಸುವುದರ ಮೂಲಕ ಭಾನುವಾರ ಚಾಲನೆ ನೀಡಿದರು.
ಈ ಗಾಳಿಪಟ ಉತ್ಸವದಲ್ಲಿ ವೃತ್ತಿಪರ ಗಾಳಿಪಟ ಕ್ರೀಡಾಪಟುಗಳು ಹಾಗೂ ಆಸಕ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಡೆಲ್ಟಾ,ರೋರಿಂಗ್, ಪ್ಯಾರಾಚೂಟ್, ಸ್ಪ್ರೈಲ್,3ಡಿ, ಸ್ಪೈಡರ್‍ಮ್ಯಾನ್, ಡಾಲ್ಪಿನ್, ಅಕ್ಟೋಪಸ್, ಈಗಲ್,ಸ್ಮೈಲಿ, ಸ್ಟಾರ್, ಸ್ಪೈರಲ್ ಕಿಟ್ಸ್ 3ಇನ್1 ಸೇರಿದಂತೆ 35 ವಿವಿಧ ರೀತಿಯ ಬಣ್ಣಗಳ ಗಾಳಿಪಟಗಳು ಈ ಉತ್ಸವದಲ್ಲಿ ಕಂಡುಬಂದವು.
ಈ ಗಾಳಿಪಟ ಉತ್ಸವದಲ್ಲಿ ಭಾನುವಾರದ ರಜೆ ಹಿನ್ನೆಲೆಯಲ್ಲಿ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಧಾವಿಸಿ ಗಾಳಿಪಟಗಳನ್ನು ಆಡಿಸುತ್ತಿರುವುದು ಕಂಡುಬಂದಿತು. ಹಂಪಿ ಉತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ.  ನವೆಂಬರ್ 3ರಿಂದ 5ರವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿಯೂ ಹೆಚ್ಚಿನ ಸಂಖ್ಯೆ ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮನವಿ ಮಾಡಿದರು.
ಈ ಗಾಳಿಪಟ ಉತ್ಸವದಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಡ್ಯದಿಂದ ವೃತ್ತಿಪರ ಗಾಳಿಪಟ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಹಂಪಿ ಜಿಪಂ ಸದಸ್ಯ ಪ್ರವೀಣಸಿಂಗ್, ಸಹಾಯಕ ಆಯುಕ್ತ ಪ್ರಶಾಂತಕುಮಾರ ಮಿಶ್ರಾ, ಗೃಹರಕ್ಷಕದಳದ ಸಮಾದೇಷ್ಟ ಶಕೀಬ್, ತಹಸೀಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.