ಟಿಪ್ಪು ಜಯಂತಿ ಕುರಿತು ವಿವಾದ ಸೃಷ್ಟಿ ಸರಿಯಲ್ಲ-ಶಾಸಕ

1011

ಬಳ್ಳಾರಿ /ಹೊಸಪೇಟೆ.ಹಜರತ್ ಟಿಪ್ಪು ಸುಲ್ತಾನ್ ಕುರಿತು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.

ಸ್ಥಳೀಯ ನಗರಸಭೆ ಆವರಣದಲ್ಲಿಂದು ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿ ಕುರಿತು ಯಾವುದೇ ರಾಜಕೀಯ ಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಮಹಾನೀಯರ ಜಯಂತಿಗಳ ಆಚರಣೆಯಿಂದ ರಾಜಕಾರಣ ಮಾಡಲು ಆಗುವುದಿಲ್ಲ. ಜಯಂತಿ ಮಾಡುವುದರಿಂದ ಜನ ಓಟು ಹಾಕುವುದಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಟಿಪ್ಪು ಸುಲ್ತಾನ್ ರ ಇತಿಹಾಸವನ್ನು ಅರಿಯುವ ಮೂಲಕ ಅವರ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮರಿಯಮ್ಮನಹಳ್ಳಿ ಸ್ಮಯೋರ್ ಕಾಲೇಜಿನ ಉಪನ್ಯಾಸಕ ಡಾ.ಎಸ್.ಬಿ.ಚಂದ್ರಶೇಖರ್ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ರನ್ನು ಕೇವಲ ಮೈಸೂರು ಮತ್ತು ಕರ್ನಾಟಕಕ್ಕೆ ಸೀಮಿತಗೊಳಿಸಬಾರದು. ಅವರೊಬ್ಬ ರಾಷ್ಟ್ರನಾಯಕರಾಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಆಡಳಿತ ಸುಧಾರಣೆಗೆ ಒತ್ತು ನೀಡಿದ್ದರು. ಇದರಿಂದ ಮುಂದುವರೆದ ಸಮಾಜಗಳ ವಿರೋಧ ಕಟ್ಟಿಕೊಂಡರು. ಇದರ ಭಾಗವಾಗಿ ಅವರ ವಿರುದ್ದ ಟೀಕೆಗಳು ಕೇಳಿ ಬಂದವು. ದೇಶದಲ್ಲಿ ಹೂಳುವವನೇ ಹೊಡೆಯ ಎಂಬ ಕಾನೂನನ್ನು ಜಾರಿಗೆ ತಂದ ಮೊದಲ ವ್ಯಕ್ತಿ ಟಿಪ್ಪು ಸುಲ್ತಾನ್. ಸಮಾಜ ನ್ಯಾಯದ ಕುರಿತು ಚಿಂತನೆ ಮಾಡಿದ ಮಹಾನುಭಾವ, ಹಿಂದುಳಿದವರ, ದಲಿತರ ಹಾಗೂ ಶೋಷಿತರ ಪರವಾದ ಕಾನೂನುಗಳನ್ನು ಜಾರಿಗೆ ತಂದಿದ್ದರಿಂದಾಗಿ ಅವರನ್ನು ದೇಶ ದ್ರೋಹಿ ಎಂಬಂತೆ ಚಿತ್ರಿಸಲಾಗುತ್ತಿದೆ. ಇದು ಇತಿಹಾಸವನ್ನು ತಿರುಚುವ ಕೆಲಸವಾಗಿದೆ ಎಂದರು.

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿ.ವೆಂಕಟೇಶ್ವರ ರೆಡ್ಡಿ, ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಮಿಶ್ರಾ, ತಹಶೀಲ್ದಾರ್ ಹೆಚ್.ವಿಶ್ವನಾಥ, ಅಂಜುಮನ್ ಕಮಿಟಿ ಅಧ್ಯಕ್ಷ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ, ನಗರಸಭೆ ಸದಸ್ಯರಾದ ಹೆಚ್.ಅಬ್ದುಲ್ ಖದೀರ್, ಕೆ.ಬಡಾವಲಿ, ಕೆ.ಗೌಸ್, ಬೆಲ್ಲದ ರವೂಫ್, ಮುಖಂಡರುಗಳಾದ ಜೆ.ಸಲೀಂ, ಜಲೀಲ್ ಭಾಷ, ಕೆ.ಕೆ.ಮೈನುದ್ದೀನ್ ದರವೇಶ್, ಬಿ.ಕಾಂ.ಮಾಬುಸಾಬ್, ಖಾಜಾ ಹುಸೇನ್ ನಿಯಾಜಿ, ಬಿ.ಫಹೀಂ ಬಾಷಾ, ಕೆ.ಜಾಫರ್, ಸೈಯದ್ ಖಾದರ್ ರಫಾಯಿ, ಜಿಲಾನ್ ಸಾಬ್, ಸೈಯದ್ ಶೋಯೆಬ್ ಉಲ್ಲಾ ಬುಕಾರಿ, ಶಫಿ ಬರಕಾತಿ, ಡಾ.ತಾರಿಹಳ್ಳಿ ವೆಂಕಟೇಶ್, ಅಯ್ಯಾಳಿ ಮೂರ್ತಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎನ್.ಎಂ.ನೂರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.