ಸತ್ಯವಂತನಿಗೆ ಜಯ ಸಿಗಬೇಕು,ಹಾಗಾದಾಗ ಮಾತ್ರ ನ್ಯಾಯ ಪ್ರಕ್ರಿಯೆಗೆ ಬೆಲೆ ಸಿಗುತ್ತೆ.

323

ಬಳ್ಳಾರಿ/ಬಳ್ಳಾರಿ:ತಪ್ಪು ಸಾಕ್ಷಿ ಹೇಳುವುದು ಬೇರೆ, ಸುಳ್ಳು ಹೇಳುವುದು ಬೇರೆ. ತಪ್ಪಿತಸ್ಥನು ಸೋತು ತಲೆ ಬಾಗಿ ನಡೆಯುವಂತಾಗಬೇಕು. ಹಣದಿಂದ ನ್ಯಾಯ ಪಡೆಯಲು ಹವಣಿಸುವವನು ಗಹಗಹಿಸಿ ನಗುವಂತಾಗಬಾರದು. ಸತ್ಯವಂತನಿಗೆ ಜಯ ಸಿಗಬೇಕು, ಹಾಗಾದಾಗ ಮಾತ್ರ ನ್ಯಾಯ ಪ್ರಕ್ರಿಯೆಗೆ ಬೆಲೆ ಸಿಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ಬಿಎಸ್ ಪಾಟೀಲ್ ಹೇಳಿದರು.ಪಾರ್ವತಿನಗರದಲ್ಲಿ ಕರ್ನಾಟಕ ಸರ್ಕಾರ, ಬಳ್ಳಾರಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಬಳ್ಳಾರಿ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸುಮಾರು 90 ಕೋಟಿ ವೆಚ್ಚದ ಬಳ್ಳಾರಿಯ ನೂತನ ಜಿಲ್ಲಾ ನ್ಯಾಯಾಲಯ ಸಂಕಿರಣದ ಶಂಕುಸ್ಥಾಪನೆ, ಭೂಮಿ ಪೂಜೆ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಳ್ಳಾರಿ ಜಿಲ್ಲಾ ನ್ಯಾಯಾಲಯಕ್ಕೆ 2 ಶತನಮಾನಗಳ ಇತಿಹಾಸವಿದೆ. ಅನೇಕ ನ್ಯಾಯಾಧೀಶರು, ವಕೀಲರು ನ್ಯಾಯದಾನ ಮಾಡುವ ಕಾಯಕದಲ್ಲಿ ಮೇರು ಸಾಧನೆ ಮಾಡಿದ್ದಾರೆ. ಇಂತಹ ಇತಿಹಾಸ ಹೊಂದಿರುವ ಬಳ್ಳಾರಿ ನ್ಯಾಯಾಲಯ ನೂತನ ಸಂಕಿರಣಕ್ಕೆ ಹೊಸ ಕನಸು ಇಟ್ಟುಕೊಂಡು ಇಂದು ಶಂಕುಸ್ಥಾಪನೆ ನೆರವೇರಿಸಲು ನನಗೆ ಸಂತೋಷವಾಗಿದೆ. ಈ ಕಟ್ಟಡ ನಿರ್ಮಾಣದಲ್ಲಿ ಸರ್ಕಾರ, ವಕೀಲರ, ನ್ಯಾಯಾಧೀಶರ, ಲೋಕೋಪಯೋಗಿ ಇಲಾಖೆ ಮತ್ತು ಜನಸಮೂಹದ ಪ್ರೀತಿ ವಿಶ್ವಾಸದಿಂದ ಇಂದು ಚಾಲನೆ ದೊರೆತಿದೆ. ಆರಂಭದಲ್ಲಿ ಕೊಂಚ ಪರಿಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಎರಡು ವರ್ಷ ಕಾಯಬೇಕಾಯಿತು. ಇದೀಗ  ಉತ್ತೇಜನ ದೊರೆತಿದೆ. 24 ತಿಂಗಳೊಳಗಾಗಿ ಅತ್ಯದ್ಭುತವಾದ ಕಟ್ಟಡ ನಿರ್ಮಿಸಿಕೊಡುವುದಾಗಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಎಜಾಜ್ ಹುಸೇನ್ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರವೂ ಕೂಡ ಅಗತ್ಯ ಅನುದಾನ ನೀಡಿದೆ. ರೂ.90 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳೂ ಸಿಗಲಿವೆ ಎಂದರು.

*ಚುರುಕುತನವಿರಲಿ:*

ನ್ಯಾಯದಾನ ಪದ್ಧತಿಯಲ್ಲಿ ವಕೀಲರು ಹೆಚ್ಚಿನ ಚುರುಕುತನ ಮತ್ತು ಮುತುವರ್ಜಿ ವಹಿಸಬೇಕು. ಪ್ರಕರಣಗಳ ವಿಚಾರಣೆ ಶೀಘ್ರ ನಡೆದು ತಪ್ಪಿತಸ್ಥರಿಗೆ ಯಾವದೇ ರೂಪದಲ್ಲಾದರೂ ಶಿಕ್ಷೆ ಆಗಲೇಬೇಕು. ಜನರಿಗೆ ನ್ಯಾಯಾಲಯದ ಬಾಗಿಲುಗಳು ಯಾವಾಗಲೂ ತೆರೆದಿರಬೇಕು. ಜನರಿಗೆ ನಾವು ನ್ಯಾಯ ಕೊಡಬೇಕು. ಯುವ ವಕೀಲರು ತರಬೇತಿ ಪಡೆದ ಹಿರಿಯ ವಕೀಲರೇ ಶಹಭಾಷ್ ಎನ್ನುವಷ್ಟರ ಮಟ್ಟಿಗೆ ಕಾನೂನನ್ನು ಅಧ್ಯಯನ ಮಾಡಿ ನ್ಯಾಯದಾನಕ್ಕೆ ಸುಗಮ ಹಾದಿ ಮಾಡಿಕೊಡಬೇಕು. ಸಾಕ್ಷಿ ಹೇಳಬೇಕಾದರೆ ಸಾಕ್ಷಿ ತಿರುಚುವುದು, ಸಾಕ್ಷಿ ಮುಚ್ಚಿಡುವುದು, ಯಾವುದಾದರೂ ದಾಖಲೆ ಸೃಷ್ಟಿಸಿದರೆ ನ್ಯಾಯಾಲಯ ಅಂಥವರನ್ನು ಹಾಗೆಯೇ ಬಿಡಬಾರದು. ಸುಳ್ಳು ದಾಖಲೆ ಸೃಷ್ಟಿಸಿದವನ ವಿರುದ್ಧ ಪ್ರಾಶ್ಯುಕ್ಯೂಷನ್ ಆರ್ಡರ್ ಮಾಡಬೇಕು. ಹಾಗಾದಾಗ ಮಾತ್ರ ನಾವು ನ್ಯಾಯಾಂಗದ ಪಾವಿತ್ರ್ಯತೆ ಕಾಪಾಡಿದಂತಾಗುತ್ತದೆ ಎಂದು ಯುವ ವಕೀಲರಿಗೆ ಕಿವಿ ಮಾತು ಹೇಳಿದರು.

*ವಿಜನ್ ಆಫ್ ಜಸ್ಟೀಸ್:*

ಬಳ್ಳಾರಿ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಓರ್ವ ನ್ಯಾಯಾಧೀಶರಿಗೆ ಪದೋನ್ನತಿ ದೊರೆತಿದ್ದರಿಂದ ಒಂದು ಸ್ಥಾನ ಮಾತ್ರ ಖಾಲಿ ಇದೆ. ಶೀಘ್ರವೇ ಅದನ್ನೂ ಭರ್ತಿ ಮಾಡುತ್ತೇವೆ. ಜಿಲ್ಲೆಯಲ್ಲಿನ ನ್ಯಾಯಾಲಯಗಳಲ್ಲಿ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಕೈ ತುಂಬ ಕೆಲಸ ನೀಡುತ್ತೇವೆ. ನ್ಯಾಯಾಲಯಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತೇವೆ. ಮಾನವ ಸಂಪನ್ಮೂಲ ನೀಡುತ್ತಿದ್ದೇವೆ. ಇದಕ್ಕಾಗಿ ವಿಜನ್ ಆಫ್ ಜಸ್ಟೀಸ್ ಅಂತ ಮಾಡಲಾಗಿದೆ. ಎಕ್ಸಲೆನ್ಸಿ ಕೆಲಸ ತೆಗೆಯಲು ಹಗಲೂ ರಾತ್ರಿ ಯುವ ವಕೀಲರು ಕಾನೂನನ್ನು ಓದಿ, ಅಧ್ಯಯನ ಮಾಡಲು ಅನುಕೂಲ ಕಲ್ಪಸುತ್ತೇವೆ ಎಂದರು. ಜನರ ಯಾವುದೇ ಪ್ರಕರಣಗಳ ಇತ್ಯರ್ಥಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಸಬೂಬು ನೀಡಬಾರದು ಎಂದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಸ್ತುವಾರಿ ಸಮಿತಿಯ ಸದಸ್ಯ ಜೆ.ಎಂ.ಅನಿಲ್ ಕುಮಾರ್ ಮಾತನಾಡಿ, ಒಳ್ಳೆ ಕಾರ್ಯಗಳು ನಡೆಯುವಾಗ ಅನೇಕ ವಿಘ್ನಗಳು ಎದುರಾಗುತ್ತವೆ. ಹೊಸ ನ್ಯಾಯಾಲಯ ಸಂಕಿರಣಕ್ಕೆ ಅನೇಕರು ಶ್ರಮ ಪಟ್ಟಿದ್ದಾರೆ. ಈ ಹಿಂದಿನ ಹೈ ಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಹಿಂಚಗೇರಿ, ಬಳ್ಳಾರಿ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ವಿಶ್ವೇಶ್ವರ ಭಟ್ ಅವರ ವರದಿ ಆಧರಿಸಿ ಸಂಕಿರಣದ ವಿನ್ಯಾಸ ರೂಪಿಸಲಾಗಿದೆ. ಆಡಳಿತಾತ್ಮಕ ತೊಡಕುಗಳಿದ್ದರೂ ಹಾಲಿ ನ್ಯಾಯಮೂರ್ತಿಗಳಾದ ಬಿಎಸ್ ಪಾಟೀಲ್ ಅವರು ಅನುದಾನ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಜಿಎಂ ರವಿ ರಾಜಶೇಖರ್ ರೆಡ್ಡಿ ಪ್ರಾಸ್ತಾವಿಕ ನುಡಿದರು. ಅಧ್ಯಕ್ಷ ಡಿಎಸ್ ಬದರಿನಾಥ್ ಸ್ವಾಗತಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿಸಿ ಬಿರಾದಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಎಜಾಜ್ ಹುಸೇನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ರಾಮಣ್ಣ ಕೆ., ಖಜಾಂಚಿ ಬಿ.ನಾಗರಾಜು, ಜಂಟಿ ಕಾರ್ಯದರ್ಶಿ ಕೆ.ಚಂದ್ರಕಲಾ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಆರ್ ವೈ ಹನುಮಂತರೆಡ್ಡಿ, ಸಂತೋಷ್ ಕುಮಾರ್ ಕೆ, ಭೀಮರಾವ್ ರೆಡ್ಡಿ, ವಿಜಯಮಹಾಂತೇಶ ಪಿ., ಎಸ್.ಎಲ್.ಪುಟ್ಟರಂಗೇಗೌಡ, ಜೆ.ವೀರೇಶ್, ಕೆ.ಪೊಂಪಾಪತಿ, ಕೆವಿ ಗಂಗಾಧರಗೌಡ, ಹೆಚ್ ಚಂದ್ರಶೇಖರರೆಡ್ಡಿ, ಡಿ.ವೆಂಕಟಶ್ ಯಾದವ್, ಎಂ.ಶ್ರೀಲತಾ ಇನ್ನಿತರರು ಇದ್ದರು.ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಪಟೇಲ್ ಸಿದ್ಧಾರೆಡ್ಡಿ, ಹಿರಿಯ ನ್ಯಾಯವಾದಿಗಳಾದ ಎನ್.ತಿಪ್ಪಣ್ಣ, ಶ್ರೀಮತಿ ಶೋಭಾ ಪಾಟೀಲ್, ಗುರುಸಿದ್ಧಸ್ವಾಮಿ, ಉಡೇದ ಬಸವರಾಜ್, ಬಿವಿ ಬಸವರಾಜ ಮೊದಲಾದವರು ಸಮಾರಂಭಕ್ಕೆ ಸಾಕ್ಷಿಯಾದರು.