ವಿದ್ಯಾರ್ಥಿಗಳು ಯೋಗಾಸನ ಹಾಗೂ ಮಾನವ ಗೋಪುರ ಪ್ರದರ್ಶನ

297

ದೊಡ್ಡಬಳ್ಳಾಪುರ : ನಗರದ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ನೆರವೇರಿಸಿ 107 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಶಾಲೆಯ ಸಾಧನೆಯನ್ನು ಶ್ಲಾಘಿಸಿದರು.

ನಗರಸಭೆ ಅಧ್ಯಕ್ಷ ಕೆ.ಬಿ. ಮುದ್ದಪ್ಪ ಮಾತನಾಡಿ ಶಾಲೆಯ ಅಭಿವೃದ್ಧಿಗೆ ನಗರಸಭೆಯಿಂದ ನೀಡಬಹುದಾದ ಸಹಕಾರವನ್ನು ನೀಡಲು ಸಿದ್ಧ ಎಂದರು. ಶಾಲೆಯ ಶೌಚಾಲಯಕ್ಕೆ ಯುಜಿಡಿ ಸಂಪರ್ಕವನ್ನು ಹಾಗೂ ನೀರಿನ ವ್ಯವಸ್ಥೆಯನ್ನು ಉಚಿತವಾಗಿ ಮಾಡಿಕೊಡುವ ಭರವಸೆ ನೀಡಿದರು.

ಎಸ್‍ಡಿಎಂಸಿ ಉಪಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ನೇಯ್ಗೆಯವರ ಬೀದಿ ಪಾಠಶಾಲೆಯಲ್ಲಿ ಓದಿರುವ ಎಷ್ಟೋ ಜನ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಸಾರ್ವಜನಿಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಸಾಲಸೋಲ ಮಾಡಿ ಪರದಾಡುವುದಕ್ಕಿಂತ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದರೆ ನಿರಾತಂಕವಾಗಿ ಮಕ್ಕಳ ಶಿಕ್ಷಣ ಸಾಧ್ಯವಾಗುವುದಲ್ಲದೆ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.

ಹಿರಿಯ ನಗರಸಭಾ ಸದಸ್ಯ ತ.ನ. ಪ್ರಭುದೇವ ಮಾತನಾಡಿ, 1910 ರಲ್ಲಿ ಪ್ರಾರಂಭವಾದ ಈ ಮಾದರಿ ಶಾಲೆ 107 ವರ್ಷಗಳನ್ನು ಪೂರೈಸಿದೆ. ಹಲವಾರು ತಲೆಮಾರಿನ ಜನರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ನ್ಯಾಯಾಧೀಶರು, ವಕೀಲರು, ವೈದ್ಯರು, ಸಮಾಜ ಸೇವಕರಾಗಿ ಹೆಸರು ಮಾಡಿದ್ದಾರೆ. ಶಾಲೆಗೆ ಹಲವು ಜನ ದಾನ ಧರ್ಮಗಳನ್ನು ಮಾಡಿ ಶತಮಾನ ಪೂರೈಸಿದರೂ ಶಾಲೆ ಸುಸ್ಥಿತಿಯಲ್ಲಿರುವಂತೆ ಕಾಯ್ದುಕೊಂಡು ಬಂದಿದ್ದಾರೆ ಎಂದರು.

ಶಾಲೆಯ ಮಕ್ಕಳು ವಾರ್ಷಿಕೋತ್ಸವಕ್ಕೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನೆರೆದಿದ್ದ ಗಣ್ಯರ ಮೆಚ್ಚುಗೆಗೆ ಪಾತ್ರರಾದರು. ಯೋಗ ತರಬೇತುದಾರ ರಾಮಕೃಷ್ಣಯ್ಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗಾಸನ ಹಾಗೂ ಮಾನವ ಗೋಪುರ ಪ್ರದರ್ಶನ ನಿರ್ಮಿಸಿ ಮೆಚ್ಚುಗೆಗೆ ಪಾತ್ರರಾದರು.

ಎಸ್‍ಡಿಎಂಸಿ ಅಧ್ಯಕ್ಷೆ ಆರ್. ತ್ರಿವೇಣಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನಗರ ವೃತ್ತದ ಐಸಿಓ ಕೆ.ಎನ್. ಭೀಮರಾಜು, ಪ್ರಹ್ಲಾದ್, ಬಿಆರ್‍ಪಿ ರಮೇಶ್, ಸಿ.ಆರ್.ಪಿ. ಕೇಶವಮೂರ್ತಿ, ಕೆ.ಎಚ್. ಬಸವಲಿಂಗಯ್ಯ, ಮಲ್ಲಿಕಾರ್ಜುನ ರೆಡ್ಡಿ, ದಾನಿ ಎ.ವಿ. ರಘು, ನಗರಸಭಾ ಸದಸ್ಯ ಕೆ.ಜಿ. ರಘುರಾಂ, ಎಚ್.ಎಸ್. ಶಿವಶಂಕರ್, ಶಾಲೆಯ ಮುಖ್ಯ ಶಿಕ್ಷಕ ಸಿ. ಶಿವಶಂಕರ್, ಎಸ್‍ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಯೋಗ ತರಬೇತುದಾರ ರಾಮಕೃಷ್ಣಯ್ಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗಾಸನ ಹಾಗೂ ಮಾನವ ಗೋಪುರ ಪ್ರದರ್ಶನ ನಿರ್ಮಿಸಿ ಮೆಚ್ಚುಗೆಗೆ ಪಾತ್ರರಾದರು.