ಶಾಶ್ವತ ನೀರಾವರಿಗೆ ಆಗ್ರಹಿಸಿ ಬಂದ್.

191

ತುಮಕೂರು/ಚಿಕ್ಕನಾಯಕನಹಳ್ಳಿ:ತಾಲ್ಲೂಕಿನ ೨೬ ಕೆರೆಗಳಿಗೆ ಸಾಸಲು ಪೆಮ್ಮಲದೇವರಹಳ್ಳಿ- ಹೊಸಕೆರೆ ಮೂಲಕ ನೀರು ಹಾಯಿಸುವ ಹೇಮಾವತಿ ನಾಲಾ ಕಾಮಗಾರಿ ಕಳೆದ ಹತ್ತು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದು ,ನಾಲಾ ಕಾಮಗಾರಿಯ ತಾಂತ್ರಿಕ ತೊಂದರೆಯನ್ನು ಸರಿಪಡಿಸಿ ಜರೂರಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ ಹಾಗೂ ಕುಪ್ಪೂರು ಗದ್ದಿಗೆ ಮಠದ ಡಾ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಯ ಸಹಕಾರದೊಂದಿಗೆ ಹುಳಿಯಾರು ಬಂದ್ ಗೆ ಕರೆ ನೀಡಲಾಗಿದೆ.ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಳು ಹಲವಾರು ವರ್ಷದಿಂದ ಕಾರ್ಯರೂಪಕ್ಕೆ ಬಾರದೆ ನಿರ್ಲ್ಯಕ್ಷಕ್ಕೊಳಗಾಗಿರುವುದರ ವಿರುದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಬಂದ್‌ಗೆ ಕರೆನೀಡಲಾಗಿದ್ದು ತಾಲ್ಲೂಕ್ ಬಂದ್‌ಗೆ ಗೆ ಬೆಂಬಲಿಸಿ ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಬಂದ್ ಗೆ ಕರೆ ನೀಡಲಾಗಿದ್ದು ಆಟೋ ಚಾಲಕರು,ವಾಹನ ಚಾಲಕರು, ಅಂಗಡಿ ಮಾಲೀಕರು,ಕೂಲಿ ಕಾರ್ಮಿಕರು,ರೈತರು,ಜನಪ್ರತಿನಿಧಿಗಳು,ಶಾಲಾ ಕಾಲೇಜುಗಳವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.ನಿರಂತರ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಅಂತರ್ಜಲ ಪಾತಾಳಕ್ಕಿಳಿದಿದೆ. ಮಳೆಯನ್ನೇ ನಂಬಿರುವ ತಾಲ್ಲೂಕಿನ ರೈತಭಾಂಧವರು ಇಂದು ಹತಾಶರಾಗಿದ್ದಾರೆ. ಹಲವು ನೀರಾವರಿ ಯೋಜನೆಗಳು ಈ ಭಾಗಕ್ಕೆ ಲಭ್ಯವಿದ್ದರೂ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ತಾಲ್ಲೂಕು ದಯನೀಯ ಸ್ಥಿತಿಗೆ ತಲುಪಿದೆ.ಈ ಎಲ್ಲಾ ಕಾರಣಗಳಿಂದ ತಾಲ್ಲೂಕು ಬಂದ್‌ಗೆ ಕರೆ ನೀಡಿರುವ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿಯ ಸಂಚಾಲಕರು ಬಂದ್ ಮೂಲಕ ಹಲವು ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಸಲಿದ್ದಾರೆ.

ಕಳೆದ ಹದಿನೈದು ವರ್ಷದ ಯೋಜನೆಯಾದ ತಾಲ್ಲೂಕಿನ ೨೬ ಕೆರೆಗಳಿಗೆ ಕುಡಿಯುವ ನೀರಿನ ನಿವಾರಣೆಗಾಗಿ ಹೇಮಾವತಿ ನಾಲೆಯಿಂದ ನೀರೊದಗಿಸುವ ಕಾರ್ಯದಲ್ಲಾಗಿರುವ ತೊಡಕುಗಳನ್ನು ನಿವಾರಿಸಿ ಯೋಜನೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ ೧೯ ಕೆರೆಗಳನ್ನು ಮಾತ್ರ ಸೇರಿಸಿದ್ದು ಹುಳಿಯಾರು ಹಾಗೂ ಹಂದನಕರೆ ಹೋಬಳಿಯ ಎಲ್ಲಾ ಕೆರೆಗಳನ್ನು ಈ ಯೋಜನೆಗೆ ಸೇರ್ಪಡೆಗೊಳ್ಳಬೇಕು, ಹೇಮಾವತಿ ನಾಲಾ ಯೋಜನೆಯಲ್ಲಿ ಮುಸಕೊಂಡ್ಲಿ ಕ್ರಾಸ್ ಶಾಖಾವಲಯದ ಮೂಲಕವಾಗಿ ತಾಲ್ಲೂಕಿನ ಮದನಮಡು ಕೆರೆಗೆ ಗುರುತ್ವಾಕರ್ಷಣೆ ಮೂಲಕ ನೀರು ಹಾಯಿಸುವ ಯೋಜನೆಗೆ ಸರ್ವೆಕಾರ್ಯಕ್ಕೆ ಆದೇಶ ನೀಡಬೇಕು ಹಾಗೂ ಎತ್ತಿನ ಹೊಳೆ ಯೋಜನೆಯಲ್ಲಿ ತಾಲ್ಲೂಕನ್ನು ಸಂಪೂರ್ಣವಾಗಿ ಒಳಪಡಿಸಬೇಕೆಂಬ ಒತ್ತಾಯಗಳನ್ನು ಬಂದ್ ಮೂಲಕ ಒತ್ತಾಯಿಸಲಿದ್ದಾರೆ.