ಸುಳ್ಳು ಆರೋಪದಿಂದ ಅವಮಾನವಾಗಿದೆ..

368

ಚಾಮರಾಜನಗರ/ಕೊಳ್ಳೇಗಾಲ:ನನಗೆ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗದಂತೆ ಮಾಡುವ ಉದ್ದೇಶದಿಂದ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವಮಾನ ಮಾಡುತ್ತಿದ್ದಾರೆ ಎಂದು ಮಧುವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಡಾ.ಯಶೋಧಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.ಮಧುವನಹಳ್ಳಿ ಗ್ರಾಮದ ಅವರ ಸ್ವಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ನನ್ನ ಧಾರ್ಮಿಕ ಸಾಧನೆಗೆ ನಾನು ಡಾಕ್ಟರೇಟ್ ಪಡೆದಿದ್ದು ಇದರ ಮಹತ್ವ ಮತ್ತು ಮಾಹಿತಿ ಅರಿಯದ ಕೆಲವರು ನಾನು ಗ್ರಾಮದಲ್ಲಿ ಶೌಚಾಲಯಗಳನ್ನು ಕಟ್ಟಿಸಿದ ಕಾರಣಕ್ಕೆ ನನಗೆ ಡಾಕ್ಟರೇಟ್ ಸಿಕ್ಕಿದೆ ಎಂದು ತಪ್ಪು ತಪ್ಪಾಗಿ ಹಬ್ಬಿಸುವುದಲ್ಲದೆ ಸುಳ್ಳು ಹೇಳಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ನಾನು ನನ್ನ ಸ್ವಂತ ಹಣ ವ್ಯಯಿಸಿ ಚಾಮುಂಡಿ ದೇವಸ್ಥಾನ ಕಟ್ಟಿದ್ದೇನೆ. ಇಷ್ಟೇ ಅಲ್ಲದೇ ಧಾರ್ಮಿಕ ವಿಚಾರಗಳಲ್ಲಿನ ನನ್ನ ಹಲವಾರು ಸಾಧನೆಗಳನ್ನು ಗುರುತಿಸಿ ನನಗೆ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ. ಆದರೆ ಗ್ರಾಮದ ಕೆಲವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನನಗೆ ಅವಮಾನ ಮಾಡುತ್ತಿದ್ದಾರೆ. ಇದರಿಂದ ನನಗೆ ಬಹಳ ನೋವಾಗಿದೆ. ನನಗೆ ನ್ಯಾಯ ದೊರಕಬೇಕಿದೆ ಎಂದು ಅಂಗಲಾಚಿದರು.ಶೌಚಾಲಯ ಕಟ್ಟಿಕೊಂಡವರಿಗೆ ಸರ್ಕಾರ ಅದರ ವೆಚ್ಚ ಭರಿಸಿ ಕೊಡುತ್ತದೆ. ಆದರೆ ಶೌಚಾಲಯ ಮುಂಚಿತವಾಗಿ ನಿರ್ಮಿಸಿಕೊಳ್ಳಬೇಕು. ನಿರ್ಮಿಸಿಕೊಳ್ಳಲು ಹಣವಿಲ್ಲದ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಹಣ ನೀಡಿ ಶೌಚಾಲಯ ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಿದ್ದೇನೆ ಎಂದು. ಇದರ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಇನ್ನೂರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣವಾಗಿವೆ. ಈಗಲೂ ಗ್ರಾಮದ ಜನರು ಶೌಚಾಲಯ ಕಟ್ಟಿಸಿ ಕೊಡುವಂತೆ ನನ್ನ ಮನೆ ಬಾಗಿಲಿಗೆ ತಿರುಗುತ್ತಿದ್ದಾರೆ. ಆದರೆ ಕೆಲವರ ದೆಸೆಯಿಂದ ನನಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅಡ್ಡಿಯಾಗುತ್ತಿದೆ ಎಂದು ದೂರಿದರು.ಗ್ರಾಮಸ್ಥರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಸಾಕಷ್ಟು ದುಡಿದಿದ್ದೇನೆ. ಇಷ್ಟೆಲ್ಲಾ ಇದ್ದರೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಧುವನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಮಹಾದೇವು, ಗ್ರಾಮದ ಮುಖಂಡರಾದ ನಂಜುಂಡಸ್ವಾಮಿ, ದಾಸಶೆಟ್ಟಿ, ಸುಂದರಶೆಟ್ಟಿ, ದೊಡ್ಡವೀರಶೆಟ್ಟಿ ಉಪಸ್ಥಿತರಿದ್ದರು.