ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪ್ರತಿಘಟನೆ

317

ಕಲ್ಲುಕ್ವಾರಿಯಲ್ಲಿ ಪಾಲಿಕೆಯ ಘನ ತ್ಯಾಜ್ಯ

ಬೆಂಗಳೂರು (ಮಹದೇವಪುರ): ಮಿಟಗಾನಹಳ್ಳಿ ಮತ್ತು ಬೆಳ್ಳಹಳ್ಳಿ ಕಲ್ಲುಕ್ವಾರಿಯಲ್ಲಿ ಬಿಬಿಎಂಪಿ ಅನಧಿಕೃತವಾಗಿ ಅವೈಜ್ಞಾನಿಕ ಪದ್ಧತಿಯಿಂದ ಪಾಲಿಕೆಯ ಘನ ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ವಿರೋಧಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪ್ರತಿಘಟನೆ ನಡೆಸಲಾಯಿತು.

mla aravinda limbavali protest

ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಟಗಾನಹಳ್ಳಿಯ ಸರ್ವೇ.ನಂ.2ರಲ್ಲಿ ಕಲ್ಲುಕ್ವಾರಿಯಲ್ಲಿ ಘನ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುತ್ತಿರುವ ಹಿನ್ನೆಲೆ ಕೈಗೊಂಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ತ್ಯಾಜ್ಯವನ್ನು ಸುರಿದು ಗುಂಡಿ ಮುಚ್ಚುವುದಾಗಿ ತಿಳಿಸದ್ದ ಬಿಬಿಎಂಪಿ ವಾಸ್ತವವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಘನ ತ್ಯಾಜ್ಯವನ್ನು ಸುರಿಯುವ ಮೂಲಕ ಸುತ್ತಮುತ್ತಲ ಗ್ರಾಮದ ನಿವಾಸಿಗಳು ಜೀವಿಸಲು ಅನರ್ಹವಾದ ವಾತಾವರಣ ಸೃಷ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಲಾರಿಗಳ ಮಿತಿಯನ್ನೂ ಸಹ ಹೆಚ್ಚಿಸಿದ್ದು, ಕಸ ವಿಲೇವಾರಿಗೆ ಪಾಲಿಕೆ ಮಾಲಿನ್ಯ ಮಂಡಳಿ ಸೆರಿದಂತೆ ಸಂಭಂದಪಟ್ಟ ಯಾವುದೇ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಕಸ ತಂದು ಸುರಿಯುತ್ತಿವೆ ಎಂದರು. ನಿರಂತರವಾಗಿ ಸುರಿಯುತ್ತಿರುವ ಕಸದಿಂದ ನೊಣ, ಸೊಳ್ಳೆ ಸೇರಿದಂತೆ ಕ್ರಿಮಿಕೀಟಗಳು ಗ್ರಾಮಕ್ಕೆ ಲಗ್ಗೆ ಇಟ್ಟಿವೆ, ಕೊಳೆತ ಕಸದಿಂದ ಹೊರಬರುವ ದುರ್ವಾಸನೆ ಗ್ರಾಮಗಳನ್ನು ಸಂಪೂರ್ಣವಾಗಿ ಆವರಸಿದ್ದು, ಮೂಗು ಮುಚ್ಚಿಕೊಂಡು ಗ್ರಾಮಸ್ಥರು ಜೀವಿಸುವಂತಾಗಿದೆ. ಕಣ್ಣೂರು ಗ್ರಾಮ ಪಂಚಾಯಿತಿಯ ಸುತ್ತಮುತ್ತಲಿರುವ ಶಾಲಾ ಕಾಲೇಜುಗಳಿಗೂ ಸಹ ಇದು ತೊಂದರೆಯಾಗಿ ಪರಿಣಮಿಸಿದೆ, ಬಿಬಿಎಂಪಿ ಲಾರಿಗಳ ಸಂಚಾರದಿಂದ ರಸ್ತೆಗಳೂ ಸಹ ಹದಗೆಟ್ಟಿವೆ. ಕಲ್ಲುಕ್ವಾರಿಯಲ್ಲಿ ನಿರಂತರವಾಗಿ ಕಸ ಸುರಿಯುವ ಕಾರಣ ಸುತ್ತಮುತ್ತಲ ಗ್ರಾಮಗಳ ಮಕ್ಕಳಿಗೆ ಮತ್ತು ವೃದ್ಧರಿಗೆ ಜ್ವರ, ಮಲೇರಿಯಾ, ಸೇರಿದಂತೆ ಹಲವು ರೀತಿಯ ಅನಾರೋಗ್ಯ ಲಕ್ಷಣಗಳಿಗೆ ತುತ್ತಾಗುತ್ತಿದ್ದಾರೆ. ಕಣ್ಣೂರು ಗ್ರಾಮ ಪಂಚಾಯಿತಿ ಮಿಟಗಾನಹಳ್ಳಿ, ಸಾತನೂರು, ಹೊಸೂರು ಬಂಡೆ ಸೇರಿದಂತೆ ಇನ್ನಿತರೆ ಗ್ರಾಮಗಳ ನಿವಾಸಿಗಳು ಸತತವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಬೆಳ್ಳಹಳ್ಳಿ ಜನರ ಸ್ಥಿತಿಯೂ ಸಹ ಸಂಕಷ್ಟದಲ್ಲಿದೆ ಎಂದರಲ್ಲದೆ ಕೂಡಲೆ ಪರಿಯಾಯ ವ್ಯವಸ್ಥೆ ಕಲ್ಪಿಸಿ ಆರೋಗ್ಯ ರಕ್ಷಣೆಗೆ ಮುಂದಾಗದಿದ್ದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದರು .
ಈ ಹಿಂದೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ವೈಜ್ಞಾನಿಕ ಪದ್ಧತಿಯನ್ನು ಬಳಸಿ ಭೂಚಕ್ರ ಘಟಕ ನಿರ್ಮಿಸಿ ಅಂದಿನ ದಿನದ ಕಸವನ್ನು ಅಂದೇ ಸಂಸ್ಕರಣೆ ಮಾಡಲಾಗುವುದೆಂದು ತಿಳಿಸಿದ್ದರು ಆದರೆ ತಮ್ಮ ಮಾತು ತಪ್ಪಿದ್ದಾರೆ ಎಂದರು. ಕಸವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ತಯಾರಿಸಲು ಹಲವು ಸಂಶೋಧನೆಗಳು ನಡೆದಿದ್ದು, ಅನೇಕ ಕಂಪೆನಿಗಳು ಕಸ ಸಂಸ್ಕರಣೆಗೆ ಮುಂದು ಬರೆತ್ತಿವೆಯಾದರೂ ಪಾಲಿಕೆ ಇಂತಹ ಕಂಪೆನಿಗಳಿಗೆ ಸಮ್ಮತಿ ಸೂಚಿಸಿಲ್ಲ, ಕಸ ವಿಲೇವಾರಿ ಇಂದು ದೊಡ್ಡ ಲಾಭಿಯಾಗಿ ಪರಿಣಮಿಸಿದ್ದು, ಸರ್ಕಾರ, ಮಹಾನಗರ ಪಾಲಿಕೆ ಮತ್ತು ಗುತ್ತಿಗೆದಾರರು ಇದರಲ್ಲಿ ಶಾಮೀಲಾಗಿವೆ ಎಂದು ಆರೋಪಿಸಿದರು. ಮಂಡೂರು ಸಹ ಇದೇ ರೀತಿಯ ಭೂಮಿ ತುಂಬುವಂತೆ ಅನುಮತಿ ಪಡೆದು ತ್ಯಾಜ್ಯವಿಲೇವಾರಿಗೆ ಬಳಸಿ ಸಂಪೂರ್ಣ ಜನ ಜೀವನವನ್ನು ಹಾಳು ಮಾಡಲಾಗಿತ್ತು ಅದೇ ರೀತಿಯ ಇನ್ನೊಂದು ನಿದರ್ಶನವಾಗಿ ಕಣ್ಣೂರು ಗ್ರಾಮ ಪಂಚಾಯಿತಿಯ ಸ್ಥಿತಿಯಾಗುತ್ತಿದೆ ಎಂದರು.
ಕಣ್ಣೂರು ಗ್ರಾಮ ಪಂಚಾಯತಿ ವತಿಯಿಂದ ಯಾವುದೇ ರೀತಿ ಅನುಮತಿ ನೀಡಿಲ್ಲ ಎಂದು ಪಂಚಾಯತಿ ಅಧ್ಯಕ್ಷ ಭಕ್ತಪಾಲ್ ಹೇಳಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಕಣ್ಣೊರೆಸೋ ತಂತ್ರ ನಡೆಸುತ್ತಿದ್ದಾರೆ, ಆದರೆ ಬಿಬಿಎಂಪಿಯಲ್ಲಿನ ದಾಖಲೆ ಪರಿಶೀಲಿಸಿದಾಗ ಪಂಚಾಯತಿ ವತಿಯಿಂದ ಹಣದಾಸೆಗೆ ಎನ್‍ಒಸಿ ನೀಡಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನಂಜೇಗೌಡ ದೂರಿದ್ದಾರೆ.
ಈ ಸಂದರ್ಬದಲ್ಲಿ ಪಾಲಿಕೆ ಸದಸ್ಯ ಮುನಿಂದ್ರಕುಮಾರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ನಾಗರಾಜಪ್ಪ, ಮುಖಂಡರಾದ ಎ.ರವಿ ಕೆ.ಸಿ.ಮುನಿನಾರಾಯಣಪ್ಪ, ಸೊಣ್ಣಪ್ಪ, ಶ್ರೀನಿವಾಸ್, ರಘು, ವೆಂಕಟೇಶ್ ಮುಂತಾದವರು ಹಾಜರಿದ್ದರು.
ಮಹದೇವಪುರ ಕ್ಷೇತ್ರದ ಮಿಟ್ಟಗಾನಹಳ್ಳಿ ಕಸ ಸಂಗ್ರಹಣಾ ಘಟಕವನ್ನು ವಿರೋಧಿಸಿ ಸ್ಥಳೀಯ ಶಾಸಕ ಅರವಿಂದಲಿಂಬಾವಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು