ಪ್ರಭಾರಅಂಗನವಾಡಿ ಕಾರ್ಯಕರ್ತೆಯನ್ನು ಖಾಯಂಗೊಳಿಸುವಂತೆ ಒತ್ತಾಯ.

259

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ನೆಕ್ಕುಂದಿ ಪೇಟೆಯ ಅಂಗನವಾಡಿ ಕೇಂದ್ರಕ್ಕೆ ಹಾಲಿ ಪ್ರಭಾರಿಯಾಗಿ ನೇಮಕ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಪೋಷಕರು ಇಲ್ಲಿನ ಶಿಶು ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಿರ್ಮಲ ರವರಿಗೆ ಗುರುವಾರ ಮನವಿ ಸಲ್ಲಿಸಿದರು.

ನೆಕ್ಕುಂದಿ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗರತ್ನಮ್ಮ ಎಂಬವರು ವಯೋ ನಿವೃತ್ತಿ ಯಾಗಿದ್ದು ಖಾಲಿ ಇರುವ ಜಾಗಕ್ಕೆ ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಎಂ.ವೀಣಾ ಎಂಬುವರನ್ನು ಆಡಳಿತ ಹಿತದೃಷ್ಟಿಯಿಂದ ಪ್ರಭಾರ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕ ಮಾಡಿದ್ದು ಅವರು ಕಳೆದ ಒಂದು ತಿಂಗಳಿನಿಂದ ಕಾರ್ಯನಿರ್ವಹಿಸಿದ್ದರು.

ತಾಲೂಕಿನ ಹೆಬ್ಬರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಹಲ್ಯ ಎಂಬುವರ ಕೋರಿಕೆ ಮೇರೆಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಅಹಲ್ಯ ರವರನ್ನು ನೆಕ್ಕುಂದಿ ಪೇಟೆ ಅಂಗನವಾಡಿ ಕೇಂದ್ರಕ್ಕೆ ಸ್ಥಾನಪಲ್ಲಟ ನೇಮಕಮಾಡಿ ಆದೇಶ ಹೊರಡಿಸಿದ್ದರು.

ಗುರುವಾರ ಅಧಿಕಾರ ವಹಿಸಿಕೊಳ್ಳಲು ಬಂದ ಅಹಲ್ಯಾ ರವರನ್ನು ಅಧಿಕಾರ ವಹಿಸಿಕೊಳ್ಳುದಂತೆ ತಡೆದ ಮಕ್ಕಳ ಪೋಷಕರು ಅಹಲ್ಯರವರ ಕಾರ್ಯವೈಖರಿ ಸರಿ ಇಲ್ಲ ಎಂದು ದೂರಿ ಅವರು ಅಂಗನವಾಡಿ ಕಟ್ಟಡದ ಬಾಗಿಲು ಸಹಾ ತೆರೆಯಲು ಬಿಡದೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಇಲ್ಲಿನ ಶಿಶು ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಿರ್ಮಲ ರವರು ಪೋಷಕರೊಂದಿಗೆ ಮಾತುಕತೆ ನಡೆಸಿ ಅಹಲ್ಯವರನ್ನು ಇಲ್ಲಿಗೆ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿರುವುದರಿಂದ ಅವರು ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.

ಅದಕ್ಕೆ ಒಪ್ಪದ ಪೋಷಕರು ಹಾಲಿ ಪ್ರಭಾರೆಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ವೀಣಾ ಎಂಬುವರನ್ನು ಅಂಗನವಾಡಿ ನೆಕ್ಕುಂದಿಪೇಟೆ ಅಂಗನವಾಡಿ ಕೇಂದ್ರಕ್ಕೆ ಸ್ಥಾನಪಲ್ಲಟ ಮಾಡುವಂತೆ ಅಲ್ಲಿಯವರೆವಿಗೂ ಅಂಗನವಾಡಿ ಕೇಂದ್ರದ ಬೀಗ ತೆಗೆಯುವುದಕ್ಕೆ ಬಿಡುವುದಿಲ್ಲ ಎಂದು ಅಡ್ಡಿಪಡೆಸಿದ್ದಾರೆ.

ನಂತರ ಪೋಷಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವರಿಗೆ ಮನವಿ ಪತ್ರವನ್ನು ಸಹ ಸಲ್ಲಿಸಿದ್ದಾರೆ. ಮನವಿ ಪತ್ರ ಸ್ವೀಕರಿಸಿದ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ನಿರ್ಧಾರ. ತೆಗೆದುಕೊಳ್ಳುವುದಾಗಿ ಹೇಳಿ ಅಲ್ಲಿಂದ ತೆರಳಿದರು.