ಪಲ್ಸ್ ಆಕ್ಸಿಮೀಟರ್,ಥರ್ಮಲ್ ಸ್ಕ್ಯಾನರ್ಗಳು ಆರೋಗ್ಯ ಇಲಾಖೆಗೆ ಹಸ್ತಾಂತರ.

170

ಬೆಂಗಳೂರು/ ಮಹದೇವಪುರ:- ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಶಾ ಕಾರ್ಯಕರ್ತೆಯರು, ಕಾಲೇಜ್ ನರ್ಸಿಂಗ್ ವಿದ್ಯಾರ್ಥಿಗಳು, ಬಿಬಿಎಂಪಿ ಆರೋಗ್ಯ ವಿಭಾಗದ ಪೌರ ಕಾರ್ಮಿಕರು ಮನೆ ಮನೆ ತೆರಳಿ ಸೋಂಕು ತಪಾಸಣೆಯನ್ನು ಮಾಡಿಸಲಾಗುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಬಿಜೆಪಿ ಕಛೇರಿಯಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಹಾಗೂ ಅವರ ಮುಖಂಡರ ಸಹಯೋಗದೊಂದಿಗೆ ಖರೀದಿಸಿದ್ದ 200 ಪಲ್ಸ್ ಆಕ್ಸಿಮೀಟರ್, 200 ಥರ್ಮಲ್ ಸ್ಕ್ಯಾನರ್ ಉಪಕರಣಗಳನ್ನು ಶುಕ್ರವಾರ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಶಾಸಕ ಲಿಂಬಾವಳಿ, ಕೋವಿಡ್-19 ಹರಡುತ್ತಿರುವ ಹಿನ್ನೆಲೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗೆ ಆಶಾ ಕಾರ್ಯಕರ್ತೆಯರು, ಕೆಲ ಕಾಲೇಜ್ ಗಳ ನರ್ಸಿಂಗ್ ವಿದ್ಯಾರ್ಥಿಗಳು, ಬಿಬಿಎಂಪಿ ಆರೋಗ್ಯ ವಿಭಾಗದ ಪೌರ ಕಾರ್ಮಿಕರ ಮೂಲಕ ಜ್ವರದ ಪರೀಕ್ಷೆ ಹಾಗೂ ಆಕ್ಸಿಜನ್ ತಪಾಸಣೆಯನ್ನು ಪ್ರತಿಯೊಬ್ಬರಿಗೂ ಮಾಡಿ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ರವಾನಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ, ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಲು ಮನವಿಯನ್ನು ಮಾಡಿದ್ದು, ತಪಾಸಣೆಗೆ ಬರುವ ಆರೋಗ್ಯ ಸಿಬ್ಬಂದಿಗೆ ಸಹಕರಿಸುವಂತೆ ಕೋರಿದರು.

ಮನೆಮನೆ ತೆರಳಿ ತಪಾಸಣೆ ಮಾಡಲು ಅಗತ್ಯ ಸಲಕರಣೆ ಕೊರತೆ ಇರುವದನ್ನು ಗುಮನಿಸಿ ನಾನು ಮತ್ತು ನಮ್ಮ ಮುಖಂಡರ ಸ್ವಂತ ಖರ್ಚಿನಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಉಪಕರಣಗಳನ್ನು ಖರೀದಿಸಿದ್ದು ಇವನ್ನು ಸರಿಯಾದ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ಉಪಯೋಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಬಂಡಾರಿ, ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾ ಚಲಪತಿ, ಮುಖಂಡರಾದ ಜಯಚಂದ್ರಾರೆಡ್ಡಿ, ನಟರಾಜ್, ಶ್ರೀನಿವಾಸ್, ಶ್ರೀಧರ್ ರೆಡ್ಡಿ ಮತ್ತಿತರರು ಇದ್ದರು.