ಮೇಕ್ ಶಿಫ್ಟ್ ಆಸ್ಪತ್ರೆಗೆ ಗುದ್ದಲಿ ಪೂಜೆ.

15

ಮೇಕ್‌ಶಿಫ್ಟ್ ಆಸ್ಪತ್ರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಗೆ ವರದಾನ: ಕಂದಾಯ ಸಚಿವ ಆರ್.ಅಶೋಕ್

ದೊಡ್ಡಬಳಾಪುರ:ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ೧೦೦ ಆಕ್ಸಿಜನೇಟೆಡ್ ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು, ಕೋವಿಡ್ ಮೂರನೇ ಅಲೆ ತಡೆಯಲು ಅನುಕೂಲಕರ ವಾಗಲಿದೆ ಹಾಗೂ ಈ ಭಾಗದ ಜನರಿಗೆ ಆಸ್ಪತ್ರೆ ವರದಾನವಾಗಲಿದೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ತಿಳಿಸಿದರು. ದೊಡ್ಡಬಳ್ಳಾಪುರ ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ೧೦೦ ಆಕ್ಸಿಜನೇಟೆಡ್ ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಲೆನೆವೊ, ಗೋಲ್ಡ್‌ಮ್ಯಾನ್ ಸ್ಯಾಚಸ್ ಕಂಪನಿಗಳು ಸಿ.ಎಸ್.ಆರ್. ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು ರೂ. ೪ ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು. ಮೇಕ್‌ಶಿಫ್ಟ್ ಆಸ್ಪತ್ರೆಯಲ್ಲಿ ೭೦ ಆಕ್ಸಿಜನ್ ಬೆಡ್‌ಗಳು, ೨೦ ಐ.ಸಿ.ಯು.(ತೀವ್ರ ನಿಗಾ ಘಟಕ) ಬೆಡ್‌ಗಳು, ೧೦ ವೆಂಟಿಲೇಟರ್ ಬೆಡ್‌ಗಳು ಹಾಗೂ ೨ ಕೆ.ಎಲ್. ಆಕ್ಸಿಜನ್ ಜನರೇಟರ್ ವ್ಯವಸ್ಥೆ ಹೊಂದಿರಲಿದ್ದು, ಈ ಆಸ್ಪತ್ರೆಯ ಲೇ ಔಟ್ ನಿರ್ಮಾಣ ಕಾಮಗಾರಿಯನ್ನು ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್, ದೊಡ್ಡಬಳ್ಳಾಪುರ ಇವರು ನಿರ್ವಹಿಸಲಿದ್ದಾರೆ ಎಂದು ಹೇಳಿದರಲ್ಲದೆ, ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಭಾರತ ಸರ್ಕಾರ, ಅಮೇರಿಕನ್ ಇಂಡಿಯಾ ಫೌಂಡೇಶನ್ ಮತ್ತು ಯು.ಎನ್.ಡಿ.ಪಿ-ಎಸ್‌ಡಿಸಿಸಿ ಕರ್ನಾಟಕವು ತಾಂತ್ರಿಕ ಪಾಲುದಾರರಾಗಿದ್ದಾರೆ ಈ ಆಸ್ಪತ್ರೆಯು ಜೂನ್ ೨೦೨೧ರ ಕೋನೆಯಲ್ಲಿ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ “ವೈದ್ಯರ ನಡೆ, ಹಳ್ಳಿ ಕಡೆ” ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಪ್ರತಿ ತಾಲ್ಲೂಕಿಗೂ ೧೫ ಮೊಬೈಲ್ ಕ್ಲಿನಿಕ್‌ಗಳ ಮೂಲಕ ಒಂದು ವಾರದಲ್ಲಿ ಹಳ್ಳಿಯೊಂದಕ್ಕೆ ಎರಡು ಬಾರಿ ಭೇಟಿ ನೀಡಿ, ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಇದುವರೆಗೆ ಒಟ್ಟು ೯೦,೨೧೮ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ೧೬,೦೪೫ ಜನರಿಗೆ ರ್‍ಯಾಟ್ ಮತ್ತು ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನಡೆಸಲಾಗಿದ್ದು, ೧೯೦೮ ಮಂದಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಇದರಿಂದ ಸೋಂಕು ಹೆಚ್ಚಾಗಿ ಪಸರಿಸದಂತೆ ತಡೆಯುವ ಕೆಲಸ ಮಾಡಲಾಗುತ್ತಿದೆ ಎಂದ ಅವರು ಜಿಲ್ಲಾಧಿಕಾರಿ ಹಾಗೂ ವೈದ್ಯರ ತಂಡಗಳಿಗೆ ಅಭಿನಂದನೆ ತಿಳಿಸಿದರು. ತಜ್ಞರ ವರದಿ ಆಧರಿಸಿ ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರಲ್ಲದೆ, ಲಾಕ್‌ಡೌನ್ ಮಾಡಿದ್ದರ ಫಲವಾಗಿ ಕೋವಿಡ್ ಸೋಂಕು ಪಸರಿಕೆ ಪ್ರಮಾಣ ಕಡಿಮೆಯಾಗಿದೆ ಎಂದರು. ಮುಂದಿನ ದಿನಗಳಲ್ಲಿಯೂ ಕೋವಿಡ್ ಸೋಂಕು ಇನ್ನಷ್ಟೂ ಕಡಿಮೆಯಾದರೆ ಹಂತ ಹಂತವಾಗಿ ಕೆಲವೊಂದು ವಲಯಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಬಹುದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ಮೇಕ್‌ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದರಿಂದ ತಾಲ್ಲೂಕಿಗೆ ಬಹಳ ಅನುಕೂಲವಾಗಲಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿಯೇ ಸಿಟಿ ಸ್ಕ್ಯಾನಿಂಗ್ ಯಂತ್ರ ಅಳವಡಿಸಲು ವಿಧಾನಸಭಾ ಸದಸ್ಯರ ಅನುದಾನದಿಂದ ೭೫ ಲಕ್ಷ ರೂಪಾಯಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು, ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ರವಿ,ರಮೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿ ಕುಮಾರ್,ಉಪ ವಿಭಾಗಾಧಿಕಾರಿ ಅರುಳ್‌ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ,ಡಿವೈಎಸ್ಪಿ ಟಿ.ರಂಗಪ್ಪ,ತಹಶೀಲ್ದಾರ್ ಶಿವರಾಜ್,ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಟಫೆ ಕಂಪನಿ ವತಿಯಿಂದ ಜಿಲ್ಲಾಡಳಿತಕ್ಕೆ ಹತ್ತು ಆಕ್ಸಿಜನ್ ಕಾನ್ಸೇಂಟ್ರೇಟರ್‌ ಗಳನ್ನು ಹಸ್ತಾಂತರಿಸ ಲಾಯಿತು.