ಆಹಾರ ಮತ್ತು ಔಷಧಿ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ

19

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ದೊಡ್ಡಬಳ್ಳಾಪುರ: ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರವೇ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಜನರಿಗೆ ನೀಡುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥನಾರಾಯಣ ಅವರು ತಿಳಿಸಿದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಇಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್(ರಿ.) ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆಂಬ್ಯುಲೆನ್ಸ್ ಹಾಗೂ ಆಹಾರ ಮತ್ತು ಔಷಧಿ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಿಗೆ ಹೆಚ್ಚಿನ ಮೂಲಭೂತ ಸೌಲಭ್ಯ, ವೈದ್ಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು. ದೊಡ್ಡಬಳ್ಳಾಪುರ ತಾಲ್ಲೂಕಿನ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್ಆರ್.ನಿಧಿಯಡಿ ಯಲ್ಲಿ ಸಿಟಿ ಸ್ಕ್ಯಾನ್ ಅಳವಡಿಸಲು ಸೂಚಿಸ ಲಾಗಿದೆ ಎಂದರಲ್ಲದೆ, ಜಿಲ್ಲೆಯಲ್ಲಿ “ವೈದರ ನಡೆ ಹಳ್ಳಿ ಕಡೆ” ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವ ಕುರಿತು ಶ್ಲಾಘಿಸಿದರು. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಬೆಡ್‌ಗಳು ಹಾಗೂ ಐಸಿಯು ಬೆಡ್‌ಗಳನ್ನು ಹೆಚ್ಚಿಸಲಾಗುವುದು ಎಂದರಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಎಲ್ಲಾ ಗ್ರಾಮಗಳಲ್ಲಿನ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಬ್ಲಾಕ್ ಫಂಗಸ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇಲ್ಲಿಯವರೆಗೂ ಔಷಧಿಗೆ ಯಾವುದೇ ರೀತಿಯ ತೊಂದರೆ ಸಂಭವಿಸಿಲ್ಲ‌ ಎಂದರು.ಕೇಂದ್ರ ಸಚಿವ ಡಿವಿ.ಸದಾನಂದ ಗೌಡ ಅವರು ತಮ್ಮ ಶಕ್ತಿ ಮೀರಿ ಔಷಧಗಳನ್ನು ರಾಜ್ಯಕ್ಕೆ ಸರಬರಾಜು ಆಗುವಂತೆ ಕ್ರಮ ವಹಿಸಿದ್ದಾರೆ ಹಾಗೂ ರಾಜ್ಯ ಸರ್ಕಾರವೂ ಸಹ 30 ಕೋಟಿ ರೂ.ಗಳ ವೆಚ್ಚ ದಲ್ಲಿ ಒಂದು ಲಕ್ಷ ಚುಚ್ಚುಮದ್ದು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದರು. ಅವಧೂತ ವಿನಯ್ ಗುರೂಜಿ ಅವರು ಮಾತ ನಾಡಿ, ಈಗಾಗಲೇ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀ ಸೇವಾ ಟ್ರಸ್ಟ್ ವತಿಯಿಂದ ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಹಾಗೂ ಆಶಾ ಕಾರ್ಯ ಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಔಷಧಿ ಕಿಟ್ ವಿತರಣೆ ಮಾಡಲಾಗಿದ್ದು, ಅದೇ ರೀತಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿಯೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವರಿಗೆ ಸಹಾಯವಾಗಲೆಂದು ಎರಡು ಉಚಿತ ಆಂಬ್ಯುಲೆನ್ಸ್, ಆಹಾರ ಸಾಮಗ್ರಿಗಳ ಕಿಟ್, ಔಷಧಿ ಕಿಟ್ ಹಾಗೂ 20 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ವಿತರಣೆ ಮಾಡಲಾಗಿದೆ ಎಂದರು. ‌ ಕೊರೋನ ಸೋಂಕು ಹರಡದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ‌ ಎಂದರು. ಅಲ್ಲದೆ, ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ಥಿತಿವಂತರು ನಿರಾಶ್ರಿತರಿಗೆ ಆಹಾರ ಒದಗಿಸುವುದು ಸೇರಿದಂತೆ ಹಲವಾರು ರೀತಿಯ ಸಹಾಯ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಪರಿಸರವನ್ನು ಈಗಾಗಲೇ ನಮ್ಮ ಸ್ವಾರ್ಥಕ್ಕಾಗಿ ನಾಶ ಮಾಡಿದ್ದೇವೆ, ಇನ್ನು ಮುಂದಾದರೂ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದ್ದು, ಅರಣ್ಯ ಪ್ರದೇಶದಲ್ಲಿರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಟ್ರಸ್ಟ್ ವತಿಯಿಂದ ಉಚಿತವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ನೀಡಲಾದ ಎರಡು ಆಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಾಯಿತು ಮತ್ತು 20 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಹಸ್ತಾಂತರಿಸಲಾಯಿತು ಹಾಗೂ ಸಾಂಕೇತಿಕ ವಾಗಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್,ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ,ಬಿಡಿಎ‌ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್,ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಹಾಗೂ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಬೇಳೂರು ರಾಘ ವೇಂದ್ರಶೆಟ್ಟಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.‌‌ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್,ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂಆರ್. ರವಿಕುಮಾರ್,ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆಂಥೋನಿ‌ ಮರಿಯಪ್ಪನ್,ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇ ಸ್ವಾಮಿ,ಉಪವಿಭಾಗಾಧಿಕಾರಿ ಅರುಳ್‌‌ ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪ, ತಹಶೀಲ್ದಾರ್ ಶಿವರಾಜ,ಮುಜರಾಯಿ ತಹಶೀಲ್ದಾರ್ ಅನಿತಾ ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿ ಗಳು ಉಪಸ್ಥಿತರಿದ್ದರು.