ಕೆರೆ ಅಂಗಳ ಒತ್ತುವರಿ ತೆರೆವು

299

ಬೆಂಗಳೂರು/ಮಹದೇವಪುರ: ಇಬ್ಬಲೂರು ಹಾಗೂ ಅಗರ ಸಮೀಪ ಕೆಐಡಿಬಿ ಹಾಗು ಕೆಲ ಸಾರ್ವಜನಿಕರು ಕಬಳಿಸಿದ್ದ ಬೆಳ್ಳಂದೂರು ಕೆರೆ ಪ್ರದೇಶವನ್ನು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು. ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ಇಬ್ಬಲೂರು ಗ್ರಾಮದ ಸರ್ವೇ ನಂ.12ರಲ್ಲಿ ಪಾಪಣ್ಣರೆಡ್ಡಿ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 20.8 ಗುಂಟೆ ಕೆರೆ ಪ್ರದೇಶವನ್ನು ಹಾಗೂ ಅಗರ ಗ್ರಾಮದ ಸರ್ವೇ ನಂ 43ರಲ್ಲಿ ಕೆಐಡಿಬಿ ಒತ್ತುವರಿ ಮಾಡಿಕೊಂಡಿದ್ದ 3 ಎಕರೆ 20 ಗುಂಟೆ ಕೆರೆಯಂಗಳವನ್ನು ಕೆರೆ ಉಸ್ತುವಾರಿ ಸದನ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆರವುಗೊಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶಕ್ಕೆ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು. ಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಅಕ್ರಮ ಒತ್ತುವರಿದಾರರ ಮೇಲೆ ವಿಶೇಷ ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ್ ಹೇಳಿದರು.