ನಮ್ಮ ಕುಮಾರಣ್ಣ’ ವೆಬ್ ಪೋರ್ಟಲ್ ಬಿಡುಗಡೆ

296

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರ ನಡುವೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಜೆಡಿಎಸ್ ಪಕ್ಷ ‘ನಮ್ಮ ಕುಮಾರಣ್ಣ’ ಹೆಸರಿನ ನೂತನ ವೆಬ್ ಪೋರ್ಟಲ್ ಅನಾವರಣಗೊಳಿಸಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸಾಮಾಜಿಕ ತಾಣ ಬಳಸಿಕೊಳ್ಳುವ ಮೂಲಕ 10 ಸಾವಿರ ವಾಟ್ಸಪ್ ಸಂಪರ್ಕ ಸಾಧಿಸಿತ್ತು. ಹೀಗಾಗಿ ನಾವು ಕೂಡ ಜಾಲತಾಣದ ಮೊರೆ ಹೋಗದ್ದೇವೆ. ಆದರೆ, ಬಿಜೆಪಿಯವರ ಅನುಕರಣೆ ಮಾಡುತ್ತಿಲ್ಲ ಎಂದರು.
ರಾಜ್ಯದ ಜನತೆ ‘ನಮ್ಮ ಕುಮಾರಣ್ಣ’ ವೆಬ್ ಪೋರ್ಟಲ್ ಮೂಲಕ ನನ್ನ ಜೊತೆ ಚರ್ಚಿಸಬಹುದು. ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶ ನನ್ನದು. ಹೀಗಾಗಿ ನೂತನ ವೆಬ್ ತಾಣಕ್ಕೆ ಚಾಲನೆ ನೀಡಿದ್ದೇವೆ. ಮಾಧ್ಯಮಗಳ ಜೊತೆಯೂ ನಿರಂತರ ಸಂಪರ್ಕದಲ್ಲಿರುತ್ತೇವೆ ಎಂದು ಹೇಳಿದರು.
ಜನರ ಕಷ್ಟಗಳಿಗೆ ಸ್ಪಂಧಿಸಲು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸಂಪರ್ಕ ಸಾಧಿಸುತ್ತೇವೆ. ಜನರ ಜತೆ ನೇರ ಸಂಪರ್ಕ ಸಾಧಿಸಲು ಸೋಷಿಯಲ್ ಮೀಡಿಯಾಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಸೇರಿದಂತೆ ಅನೇಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ. ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ನನ್ನ ಹಿತೈಶಿಗಳು ‘ನಮ್ಮ ಕುಮಾರಣ್ಣ’ ಹೆಸರಿನ ವೆಬ್ ತಾಣ ಸಿದ್ಧಪಡಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾಗಳಾದ ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್, ಗೂಗಲ್ ಪ್ಲಸ್‌ ಹಾಗೂ ಸೌಂಡ್ ಕ್ಲೌಡ್ ಜತೆ ಸಂಪರ್ಕದಲ್ಲಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.