ಮಹಿಳೆ ಅಡುಗೆ ಮನೆಗೆ ಸೀಮಿತವಾಗದಿರಲಿ

249

ಬೆಂಗಳೂರು/ಕೆ.ಆರ್.ಪುರ: ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲಾ ರಂಗಗಳಲ್ಲಿ ಸಾಧನೆಗೈಯುತ್ತಿರುವುದು ಸಂತಸ ಸಂಗತಿ ಎಂದು ಮಾಜಿ ನಗರ ಸಭಾ ಸದಸ್ಯ ಡಿ.ಎ.ಗೋಪಾಲ್ ಅಭಿಪ್ರಾಯಪಟ್ಟರು. ಇಲ್ಲಿನ ಐಟಿಐ ಕಾಲೋನಿ ಬಳಿಯ ವಿದ್ಯಾಮಂದಿರ ಶಾಲೆಯಲ್ಲಿ ದಿವಂಗತ ಶ್ರೀ ಎ.ಕೃಷ್ಣಪ್ಪಾಜಿ ಟ್ರಸ್ಟ್ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳಾಗಿ ದುಡಿಮೆ ಮಾಡುತ್ತಿದ್ದು, ಮಹಿಳೆ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸುವಷ್ಟು ಸಮರ್ಥರಾಗಿದ್ದಾರೆಂದರು.ಪುರುಷ ಪ್ರಧಾನವಾಗಿದ್ದ ಸಮಾಜದಲ್ಲಿ ಮೂಲೆಗುಂಪಾಗಿದ್ದ ಮಹಿಳೆಯರು ಶಿಕ್ಷಣ, ಆತ್ಮಸ್ಥೈರ್ಯ ದಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯ ಹಾದಿಯಲ್ಲಿ ಸಾಗುವಂತಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಮುಂಚುಣಿಯಲ್ಲಿದ್ದಾರೆಂದು ತಿಳಿಸಿದರು.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಕನ್ನಡ ರಂಗ ಪರಂಪರೆಯಿಂದ ಸಮಾಜದಲ್ಲಿ ಮಹಿಳೆ ಪಾತ್ರ ಕುರಿತು ನಾಟಕ ಪ್ರದರ್ಶನ ಮಾಡಲಾಯಿತು.  ಈ ಸಂದರ್ಭದಲ್ಲಿ ಉನ್ನತ ವ್ಯಾಸಂಗದಲ್ಲಿ 8 ಚಿನ್ನದ ಪದಕ ಪಡೆದ ಸೌಜನ್ಯ, ವಿಕಲ ಚೇತನ ಹುಸೇನ್ ಬಾನು, ಕೀರ್ತಿ, ವೆಂಕಟಲಕ್ಷ್ಮಿಗೌಡ, ಹಿರಿಯ ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ್, ನಿರ್ಧೇಶಕ ನವೀನ್ ಶಕ್ತಿ, ಮೋಹನ್ ಸೇರಿದಂತೆ ಮತ್ತಿತರರಿದ್ದರು.