ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಬೈಕ್ ರಾಲಿ

475

ಚಿಕ್ಕಬಳ್ಳಾಪುರ/ ಗುಡಿಬಂಡೆ : ಪಟ್ಟಣದಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಮತ್ತು ಕನ್ನಡ ಸೇನೆ ಸಹಯೋಗದಲ್ಲಿ ಪ್ರತ್ಯೇಕ ಕ್ಷೇತ್ರಕ್ಕಾಗಿ ದ್ವಿಚಕ್ರ ವಾಹನ ಸವಾರರರು ಅಂಬೇಡ್ಕರ್ ವೃತ್ತದಿಂದ ಮಾರುತಿ ವೃತ್ತದವರೆಗೂ ಘೋಷಣೆಗಳನ್ನು ಕೂಗುತ್ತಾ ರಾಲಿಯನ್ನು ನಡೆಸಿದರು. ನಂತರ ತಹಶೀಲ್ದಾರ್ ರವರ ಕಛೇರಿಯ ಬಳಿ ಧರಣಿ ನಡೆಸಿ, ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಸಮಿತಿಯ ಸದಸ್ಯರಾದ ಎನ್.ವಿ.ಗಂಗಾಧರ್ ಮಾತನಾಡಿ ಸ್ವಾತಂತ್ರ್ಯ ನಂತರದಲ್ಲಿ ಗುಡಿಬಂಡೆ ತಾಲ್ಲೂಕು ಸುಮಾರು ೪೦೦ ಕ್ಕೂ ಹೆಚ್ಚಿಗೂ ಹಳ್ಳಿಗಳನ್ನು ತನ್ನ ಹಿಡಿತದಲ್ಲಿ ಹಿಡಿದುಕೊಂಡು, ೧೯೬೨ ನೇ ಇಸವಿಯ ವರೆವಿಗೂ ವಿಧಾನ ಸಭಾ ಕ್ಷೇತ್ರವಾಗಿದ್ದು, ನಂತರ ನಡೆದ ಬದಲಾವಣೆಗಳಲ್ಲಿ ರಾಜಕೀಯ ಧುರಿಣರು ತಾಲ್ಲೂಕನ್ನು ಬೇರ್ಪಡೆ ಮಾಡಿ, ಹಳ್ಳಿಗಳನ್ನೆಲ್ಲಾ ಬೇರೆ ತಾಲ್ಲೂಕಿಗೆ ಸೇರಿಸಿ ಕೇವಲ ಸಣ್ಣ ತಾಲ್ಲೂಕು ಎಂಬ ಹಣೆ ಪಟ್ಟಿಯನ್ನು ಕಟ್ಟಿ, ಬಾಗೇಪಲ್ಲಿ ವಿಧಾನ ಕ್ಷೇತ್ರ ರಚನೆ ಮಾಡಿ, ಬಾಗೇಪಲ್ಲಿ ತಾಲ್ಲೂಕಿಗೆ ಸೇರಿಸಿರುತ್ತಾರೆ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಗೆದ್ದು ಬಂದ ಜನ ಪ್ರತಿನಿಧಿಗಳು ಎಲ್ಲರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಗುಡಿಬಂಡೆ ಮತಬಾಂಧವರಿಗೆ ಚಿರಋಣಿ ಯಾಗಿರುತ್ತಾರೆ, ಪ್ರತಿ ಅನುದಾನದಲ್ಲೂ, ತಾಲ್ಲೂಕಿಗೆ ಬರುವ ಸೌಲಭ್ಯಗಳಲ್ಲೂ, ಸಾರಿಗೆ ಸೌಲಭ್ಯಗಳು ಕಲ್ಪಿಸುವಲ್ಲೂ ನಮ್ಮ ರಾಜಕೀಯ ದುರೀಣರು, ಶಾಸಕ, ಲೋಕಸಭಾ, ಮಂತ್ರಿ ಮಹಾನ್ ವ್ಯಕ್ತಿಗಳು ಕೇವಲ ಭರವಸೆಯನ್ನು ಕೊಡುತ್ತಾರೆಯೇ ಹೊರತು ಗುಡಿಬಂಡೆಯತ್ತ ಕಣ್ಣೆತ್ತು ಸಹಾ ನೋಡದೇ ಗುಡಿಬಂಡೆಯ ಮತ ದೇವರುಗಳಿಗೆ ಮೋಸ ಮಾಡುತ್ತಲೇ ಬಂದಿರುತ್ತಾರೆ ದೂರಿದರು. ಗುಡಿಬಂಡೆ ತಾಲ್ಲೂಕು ಪ್ರೋ. ಡಿ.ನಂಜುಂಡಪ್ಪ ವರದಿಯಂತೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕಾಗಿದ್ದು, ತಾಲ್ಲೂಕಿಗೆ ಯಾವುದೇ ಸೂಕ್ತ ಸಾರಿಗೆ ಸೌಲಭ್ಯವಿಲ್ಲ, ಯಾವುದೇ ಸಣ್ಣ ಪುಟ್ಟ ಕೈಗಾರಿಕೆಗಳು ಇಲ್ಲ, ಶಾಶ್ವತ ನೀರಾವರಿ ಸೌಲಭ್ಯವಿಲ್ಲ, ಉನ್ನತ ಶಿಕ್ಷಣ ಹೊಂದುವ ಶಾಲಾ ಕಾಲೇಜು, ವೃತ್ತಿ ಶಿಕ್ಷಣ ಕಾಲೇಜುಗಳು ಸಹಾ ಇರುವುದಿಲ್ಲ, ಸೂಕ್ತ ಸೌಲಭ್ಯದಿಂದ ಕೂಡಿರುವ ಸರ್ಕಾರಿ ಆಸ್ಪತ್ರೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆಗಳು ಸಹ ತಾಲ್ಲೂಕಿನಲ್ಲಿ ಇರುವುದಿಲ್ಲ, ಇದೇ ಅಲ್ಲದೇ ಇನ್ನಿತರೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ನಮ್ಮ ತಾಲ್ಲೂಕನ್ನು ಕಡೆಗಣಿಸುತ್ತಲೇ ಬಂದಿರುತ್ತಾರೆ. ನಂತರ ಮಾತನಾಡಿದ ಕನ್ನಡ ಸೇನೆಯ ಕಾರ್ಯದರ್ಶಿ ಲವಕುಮಾರ್ ಮಾತನಾಡಿ ಗುಡಿಬಂಡೆ ತಾಲ್ಲೂಕು ಎರಡು ಹೋಬಳಿಗಳನ್ನು ಹೊಂದಿದ್ದು, ಇದಕ್ಕೆ ಮಂಡಿಕಲ್ಲು ಮತ್ತು ನಗರಗೆರೆ ಹೋಬಳಿಗಳನ್ನು ಸೇರಿಸಿ ಗುಡಿಬಂಡೆ ತಾಲ್ಲೂಕನ್ನು ಪ್ರತ್ಯೇಕ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎಂದರು. ನಂತರ ತಹಶೀಲ್ದಾರ್ ರವರ ಮೂಲಕ ಮಾನ್ಯ ಜಿಲ್ಲಾಧಿಕರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಅಂಬರೀಶ, ನವೀನ್ ಕುಮಾರ್, ಅಜಯ್, ಮುರಳಿ, ಅಬ್ದುಲ್ ರಹಮಾನ್, ನಾಗರಾಜು, ವರುಣ್, ಸುನಿಲ್, ಹರೀಶ್, ಅಶೋಕ, ಅಲೀಮ್, ನವೀನ್, ನಂಜಪ್ಪ, ಮುನಿರಾಜು, ಕೈಫ್, ಸುಹೇಬ್, ಶ್ರೀರಾಮ, ಕೇಶವಮೂರ್ತಿ, ಸಂದೀಪ್ ಸೇರಿದಂತೆ ಹಲವರು ರಾಲಿಯಲ್ಲಿ ಭಾಗವಹಿಸಿದ್ದರು.⁠⁠⁠⁠