ರಥ ಸಾಗಿಸಲು ಆನೆ ಸಹಾಯ!

255

ಬಳ್ಳಾರಿ/ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಎದುರಿನ ಶೆಡ್‌ನಿಂದ ಗೋಪುರದ ವರೆಗೆ ವಿರೂಪಾಕ್ಷೇಶ್ವರನ ರಥ ಕೊಂಡೊಯ್ಯುವಾಗ ಜೆ.ಸಿ.ಬಿ ಆ್ಯಕ್ಸಲ್‌ ಕಟ್‌ ಆಗಿದ್ದರಿಂದ ಸ್ಥಳೀಯರು ಹಾಗೂ ‘ಲಕ್ಷ್ಮೀ’ ಹೆಸರಿನ ಆನೆ ಸಹಾಯದಿಂದ ರಥವನ್ನು ಸಾಗಿಸಲಾಯಿತು. ಏಪ್ರಿಲ್ 11ರಂದು ನಡೆಯಲಿರುವ ಜಾತ್ರೆ ವೇಳೆ ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೀಶ್ವರ ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕೆ ಕೆಲವೇ ದಿನಗಳು ಉಳಿದಿರುವುದರಿಂದ ಎರಡೂ ರಥಗಳಿಗೆ ಸಣ್ಣಪುಟ್ಟ ದುರಸ್ತಿ ಹಾಗೂ ಅಲಂಕಾರಕ್ಕಾಗಿ ಸೋಮವಾರ ಶೆಡ್‌ನಿಂದ ಗೋಪುರದ ವರೆಗೆ ಸಾಗಿಸಲಾಯಿತು. ಮೊದಲಿಗೆ ಚಂದ್ರಮೌಳೀಶ್ವರ ರಥವನ್ನು ಸುಗಮವಾಗಿ ಕೊಂಡೊಯ್ಯಲಾಯಿತು. ನಂತರ ಜೆ.ಸಿ.ಬಿ ಸಹಾಯದಿಂದ ವಿರೂಪಾಕ್ಷೇಶ್ವರನ ರಥ ಸಾಗಿಸುವಾಗ ಅದರ ಆ್ಯಕ್ಸಲ್‌ ಕಟ್‌ ಆಗಿದೆ. ಬಳಿಕ ಸ್ಥಳೀಯರು, ಕ್ರೇನ್‌ ಹಾಗೂ ಆನೆ ಸಹಾಯದಿಂದ ಗೋಪುರದ ವರೆಗೆ ರಥವನ್ನು ಮುನ್ನಡೆಸಿಕೊಂಡು ಹೋಗಲಾಯಿತು. ಘಟನೆ ವೇಳೆ ಯಾರಿಗೂ ಏನೂ ತೊಂದರೆ ಆಗಿಲ್ಲ ಎಂದು ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ತಿಳಿಸಿದರು.