ಶೋಷಿತರ ಧ್ವನಿಯೇ ರಾಯಣ್ಣ ಬ್ರಿಗೇಡ್ …

477

ಬಳ್ಳಾರಿ/ಹೊಸಪೇಟೆ : ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಿಂದುಳಿದ, ಹಾಗೂ ದಲಿತರ ಮತ್ತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ. ಈ ಸಮುದಾಯಗಳಿಗೆ ಅನ್ಯಾಯವಾದಾಗ ರಾಜಕೀಯ ಸ್ಥಾನಮಾನಕ್ಕೂ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷಪ್ಪ ಹೇಳಿದರು.
ನಗರದ ವಡಕರಾಯ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಬಳ್ಳಾರಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇಂದಿಗೂ ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಜೊತೆಗೆ ಸಣ್ಣ ಸಣ್ಣ ಸಮುದಾಯಗಳು ಕೂಡ ಸಂವಿಧಾನದತ್ತ ಹಕ್ಕುಪಡೆಯಲು ಹೋರಾಟ ಮಾಡುತ್ತಿವೆ. ಈ ಸಮುದಾಯಗಳಿಗೆ ಧ್ವನಿಯಾಗಿ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದರು.
ರಾಜ್ಯದಲ್ಲಿ ರಾಯಣ್ಣ ಬ್ರಿಗೇಡ್ ಶೋಷಿತ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಲಿದ್ದು, ಎಲ್ಲಾ ಸಂಘಟನೆಗಳಂತೆ ಬಂದು ಹೋಗುವ ಸಂಘಟನೆಯಲ್ಲ. ನಿರಂತರವಾಗಿ ತುಳಿತಕ್ಕೊಳಗಾದ ಸಮುದಾಯಗಳ ಏಳ್ಗೆಗೆ ಶ್ರಮಿಸುವ ಸಂಘಟನೆ ಯಾಗಿದೆ ಎಂದರು.
ಶಾಸಕರು, ಸಂಸದರು, ಜನಪ್ರತಿನಿಧಿಗಳು ಏನೆಂದು ಭಾವಿಸಿಕೊಳ್ಳುತ್ತಾರೋ ಎಂದು ಬ್ರಿಗೇಡ್‌ನ ಕಾರ್ಯಕರ್ತರು ಸಭೆಗಳಲ್ಲಿ ಭಾಗವಹಿಸಲು ಹಿಂಜರಿಕೆ ಬೇಡ. ಇದು, ಶೋಷಿತರ ಪರ ಧ್ವನಿ ಮೊಳಗಿಸುವ ಸಂಘಟನೆಯಾಗಿದೆ. ನಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ರಾಜಕಾರಣದಲ್ಲಿ ಸ್ಥಾನಮಾನ ಖಾತ್ರಿಪಡಿಸಿಕೊಳ್ಳಲು ಸಂಘಟನೆ ಮುಖ್ಯವಾಗಿದೆ. ಎಲ್ಲರೂ  ಒಗ್ಗಟ್ಟಾಗಿ ಸಂಘಟನೆ ಬಲಪಡಿಸಬೇಕು. ಸಂಘಟನೆ ಬಲಿಷ್ಠವಾದಷ್ಟು ಕಾರ್ಯಕರ್ತರು ಬಲಿಷ್ಠವಾಗುತ್ತಾರೆ ಎಂಬುದನ್ನು  ಅರಿತುಕೊಂಡು ಬ್ರಿಗೇಡ್‌ನ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಏಪ್ರಿಲ್ 8 ರಂದು ದಾವಣಗೆರೆಯಲ್ಲಿ ಬ್ರಿಗೇಡ್‌ನ ಬೃಹತ್ ಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬ್ರಿಗೇಡ್ ‌ನ ಯುವ ಘಟಕ ಹಾಗೂ ಮಹಿಳಾ ಘಟಕಗಳನ್ನು ರಚಿಸಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.ಬ್ರಿಗೇಡ್‌ನ ರಾಜ್ಯ ಕಾರ್ಯದರ್ಶಿ ಅಶೋಕ್ ಗಸ್ತಿ ಮಾತನಾಡಿ, ರಾಯಣ್ಣ ಬ್ರಿಗೇಡ್ ಎಲ್ಲಾ ಸಂಘಟನೆಯಂತೆ ಬಂದು ಹೋಗುವ ಸಂಘಟನೆ ಎಂದು ಕೆಲವರು ಭಾವಿಸಿದ್ದರು. ಆದರೆ ರಾಯಣ್ಣ ಬ್ರಿಗೇಡ್ ಕಳೆದ 8-10 ತಿಂಗಳಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿ, ಜನತೆಯಲ್ಲಿ ಭರವಸೆ ಮೂಡಿಸಿದೆ. ಇದನ್ನು ರಾಜ್ಯಾದಾದ್ಯಂತ ಸಂಘಟಿಸಲು ಈಗಾಗಲೇ ರಾಜ್ಯಮಟ್ಟದ ಸಮಿತಿ ರಚನೆ ಮಾಡಲಾಗಿದ್ದು, ಶೀಘ್ರವೇ ಹಂತ ಹಂತವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದರು.
ಮುಖಂಡರಾದ ಸೋಮಶೇಖರ್, ಈ.ಟಿ. ಲಿಂಗರಾಜು, ಸೋಮಣ್ಣ, ಮಾವಿನಹಳ್ಳಿ ವೀರೇಶ್, ಅನಿಲ್ ಜೋಶಿ, ತಾ.ಪಂ.ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ, ಮಜ್ಜಿಗಿ ನಾಗರಾಜ್ ಉಪಸ್ಥಿತರಿದ್ದರು