ಸಹಕಾರಿ ಕ್ಷೇತ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವರನ್ನು ಸಿಎಂ ನೇಮಿಸಲಿ

325

ಹೊಸಪೇಟೆ: ಸಹಕಾರಿ ಕ್ಷೇತ್ರವು ಇ-ಸ್ಟಾಂಪಿಂಗ್ ವ್ಯವಹಾರದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ನಿತ್ಯ 1.5 ಕೋಟಿ ರು. ರಾಜಸ್ವ ನೀಡುವ ಬೃಹತ ಸಹಕಾರಿ ಕ್ಷೇತ್ರವಾಗಿದ್ದು, ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರತ್ಯೇಕ ಸಹಕಾರಿ ಸಚಿವರ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರಿ ಖಾತೆ ನಿರ್ವಹಣೆಗೆ ಪ್ರತ್ಯೇಕ ಸಚಿವರನ್ನು ನೇಮಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ರಾಜ್ಯಾಧ್ಯಕ್ಷ ಗುರುನಾಥ ಜಾಂತಿಕರ ಹೇಳಿದರು.

ನಗರದ ಸಿಟಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾಲೋಚನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 112 ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರಕ್ಕೆ ಕೇವಲ 15 ವರ್ಷಗಳ ಹಿಂದೆ ಜಾರಿಗೆ ಬಂದ ಸೌಹಾರ್ದ ಸಹಕಾರಿ ಕಾಯ್ದೆ ಸಹಕಾರ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಕ್ಷೇತ್ರ ವಿಸ್ತರಣೆಗಾಗಿ ಹಲವು ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ರಾಜ್ಯದಲ್ಲಿ ಸಹಕಾರಿ ನ್ಯಾಯಾಲಯ ಜಾರಿಗೆ ಬಂದಿದೆ. ಮೂರನೆಯ ವ್ಯಕ್ತಿಯ ಚೆಕ್ ನಗದೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಬೆಂಗಳೂರಲ್ಲಿ ಏಳು ಮಹಡಿ ಸ್ವಂತ ಕಟ್ಟಡ ನಿರ್ಮಿಸಿ, ಒಂದೆಡೆ ಸಹಕಾರಿ ನ್ಯಾಯಾಲಯ, ಕೇಂದ್ರ ಕಚೇರಿ, ಸದಸ್ಯರಿಗೆ ವಿಶ್ರಾಂತಿ ಗೃಹ, ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.  ನೋಟ್ ಬ್ಯಾನ್‌ನಿಂದ ಅಲ್ಪಮಟ್ಟಿಗೆ ಸಹಕಾರಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆಯಾದರೂ ಜನಪರವಾಗಿರುವುದರಿಂದ ಸಹಕಾರಿ ಕ್ಷೇತ್ರವು ಅದರಿಂದ ಚೇತರಿಸಿಕೊಳ್ಳಲಿದೆ. ರಾಜ್ಯದಲ್ಲಿ ಸುಮಾರು 4000 ಸೌಹಾರ್ದ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 60000 ಉದ್ಯೋಗವಕಶಗಳು ಸೃಷ್ಠಿಯಾಗಿವೆ. ರಾಜ್ಯ ಸಹಕಾರಿ ಚಳುವಳಿ ಹೋರಾಟಗಳು ಯಶಸ್ಸು ಕಂಡಿರುವುದರಿಂದ ಕೇರಳ ಸೇರಿದಂತೆ ಹೊರ ರಾಜ್ಯಗಳ ಸಹಕಾರಿಗಳು ಸಹಕಾರಿ ಕ್ಷೇತ್ರ ಅಧ್ಯಾಯನಕ್ಕೆ ರಾಜ್ಯವನ್ನು ಆಯ್ಕೆ ಮಾಡಿಕೊಂಡಿವೆ. ಸಹಕಾರಿ ಕ್ಷೇತ್ರ ಕ್ರಿಯಾಶೀಲವಾಗಿರುವುದರಿಂದ ಮೀಟರ್ ಬಡ್ಡಿ ದಂಧೆಯ ಮೇಲೆ ಪರಿಣಾಮ ಬೀರಿದೆ. ನೇರ ತೆರಿಗೆ ಸಂಹಿತೆಯನ್ನು ಸಹಕಾರಿಗಳಿಗೆ ಅನ್ವಯಿಸದಂತೆ ಮಾಡಲು ನಿರಂತರ ಪ್ರಯತ್ನ ನಡೆಸಲಾಗಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಲಾಗಿದ್ದು, ಚುನಾವಣಾ ಆಯೋಗ ಶೀಘ್ರ ಚುನಾವಣೆ ನಡೆಸಿದರೆ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.

ಸಹಕಾರಿಯ ಎಸ್.ಆರ್.ಸತೀಶಚಂದ್ರ, ರಮೇಶ ವೈದ್ಯ, ಮುಷ್ಟಿ ವಿರೂಪಾಕ್ಷಪ್ಪ, ರಾಜಶೇಖರ, ಜಿಲ್ಲಾ ಪ್ರತಿನಿಧಿ ಎಲ್.ಎಸ್.ಆನಂದ, ಅನೀಲ್ ಜೋಷಿ ಉಪಸ್ಥಿತರಿದ್ದರು.