ಜಾನುವಾರುಗಳಿಗೆ ಕುಡಿಯುವ ನೀರು, ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ

441

ಬಳ್ಳಾರಿ.ಹೊಸಪೇಟೆ : ವಿಜಯನಗರ ಕೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಹಾಗು ಬರ ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ನೂರಾರು ಕುರಿಗಳ ಸಮೇತ ತಹಶೀಲ್ದಾರ್ ಕಚೇರಿಗೆ ಆಗಮಿಸಿ, ಪ್ರತಿಭಟನೆ ನಡೆಸಿ ನಂತರ ಗ್ರೇಡ್-2 ತಹಶೀಲ್ದಾರ್ ರೇಣುಕಮ್ಮ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ರತನ್‌ಸಿಂಗ್ ಮಾತನಾಡಿ,  ವಿಜಯನಗರ ಕ್ಷೇತ್ರದ ಹಳ್ಳಿಗಳ ಜಾನುವಾರುಗಳಿಗೆ ಸಮರ್ಪಕ ಮೇವು, ನೀರು ಇಲ್ಲದೇ ಸಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎಲ್ಲಾ ಹಳ್ಳಿಗಳಲ್ಲಿ ಮೇವು ಸಂಗ್ರಹ ಕೇಂದ್ರ ತೆರೆಯಬೇಕು. ಜಾನುವಾರುಗಳಿಗೆ ಕುಡಿಯಲು ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಬೇಕು. ಕುರಿ ಮತ್ತು ಮೇಕೆಗಳಿಗೆ ರೋಗಗಳು ಬಾರದಂತೆ ಅಥ್ರ್ಯಾಂಕ್ಸ್ ಲಸಿಕೆ ನೀಡಬೇಕು. ಮತ್ತು ರೋಗಗಳಿಂದ ಮೃತಪಟ್ಟ ಕುರಿ, ಮೇಕೆ ಮತ್ತು ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮುಟುಗಾನಹಳ್ಳಿ ಕೊಟ್ರೇಶ್ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ರೈತರಿಗೆ ಬೆಳೆ ವಿಮೆ, ಹಾಗು ಬರ ಪರಿಹಾರ ಸಮರ್ಪಕವಾಗಿ ತಲುಪಿಲ್ಲ. ಇಂಥ ಸಂಧರ್ಭದಲ್ಲಿ ಸರ್ಕಾರ ಬರ ನಿರ್ವಹಣೆ  ಮಾಡೋದು ಬಿಟ್ಟು, ಇಡೀ ಆಡಳಿತ ಯಂತ್ರ ಉಪಚುನಾವಣೆಯಲ್ಲಿ ತೊಡಗಿದೆ. ಹೀಗಾದರೆ ರೈತರ ಪಾಡೇನು ?  ಈ ಕುರಿತು ಅನೇಕ ಪ್ರತಿಭಟನೆ, ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರು.

ಬರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಆದರೆ ಸರ್ಕಾರ, ಕೇಂದ್ರ ಅರ್ಧದಷ್ಟು ಸಾಲ ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಇನ್ನರ್ಧ ಮನ್ನಾ ಮಾಡುತ್ತದೆ ಎಂದು ಹೇಳಿ, ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಾ ಕಾಲ ಕಳೆಯುತ್ತಿದೆ. ಇನ್ನಾದರೂ ರೈತರ ಸಾಲ ಮನ್ನಾ ಮಾಡಬೇಕು. ಸಮರ್ಪಕವಾಗಿ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂದೀಪಸಿಂಗ್, ಮುಖಂಡರಾದ ಅನಂತಸ್ವಾಮಿ, ಶಶಿಧರಸ್ವಾಮಿ, ಓಬಿಸಿ ಮೋರ್ಚಾ ತಾಲೂಕಾಧ್ಯಕ್ಷ ಎ.ಎರ್ರಿಸ್ವಾಮಿ, ಡಿ.ಚಂದ್ರಶೇಖರ, ಡಿ.ರವಿಶಂಕರ, ರಾಮ್‌ಜೀನಾಯ್ಕ್, ಜೀವರತ್ನ, ಗೀತಾಶಂಕರ್, ಕೃಷ್ಣ ಸೇರಿದಂತೆ ಇತರರಿದ್ದರು.