ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ

274

ಬೆಂ,ಗ್ರಾಂ/ದೊಡ್ಡಬಳ್ಳಾಪುರ: ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಬೆಂ,ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಜಘಟ್ಟರವಿ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಸಿದ್ದಲಿಂಗಯ್ಯ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳ ಮೂಲಕ ನಗರಸಭೆ ತಲುಪಿ ಕಚೇರಿಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ರಾಜಘಟ್ಟರವಿ ಮಾತನಾಡುತ್ತಾ, ರಸ್ತೆ ಅಗಲೀಕರಣಕ್ಕೆ ಸಂಬಂಧ ಪಟ್ಟಂತೆ ವಿವಿಧ ಸಂಘಟನೆಗಳು ದಶಕಗಳಿಂದ ಹೋರಾಟಗಳು ನಡೆಸುತ್ತಿದ್ದರೂ ನಗರಾಡಳಿತ ಅದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ಕುಂಟು ನೆಪಹೇಳಿ ನುಳಿಚಿಕೊಳ್ಳಿತ್ತಾ, ತೀವ್ರನಿರ್ಲಕ್ಷ್ಯವಹಿಸುತ್ತಿದೆ.ನಗರದ ಬಹುತೇಕ ರಸ್ತೆಗಳು ಕಿರಿದಾಗಿದ್ದು ಜನಸಾಮಾನ್ಯರು ವಾಹನಗಳಲ್ಲಿ ಸಂಚರಿಸುವುದಿರಲಿ ನಡೆದಾಡುವುದೂ ಕ್ಲಿಷ್ಟಕರವಾಗಿ ಪರಿಣಮಿಸಿದ್ದರೂ ಜವಾಬ್ದಾರಿ ಮರೆತ ನಗರಸಭೆ ಆಡಳಿತ ಕಣ್ಣು ಮುಚ್ಚಿಕೂತಿದೆ ಎಂದು ದೂರಿದರು.
ದಪ್ಪಚರ್ಮದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ನರಕಯಾತನೆ ಅನುಭವಿಸುವ‌ ದೌರ್ಭಾಗ್ಯ ದೊಡ್ಡಬಳ್ಳಾಪುರದ ಜನತೆಯದ್ದಾಗಿದೆ ಎಂದರು .ಇನ್ನಾದರೂ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡದಿದ್ದಲ್ಲಿ ಹೋರಾಟಗಳು ಉಗ್ರರೂಪ ಪಡೆದುಕೊಳ್ಳುತ್ತವೆ ಎಂದು ಎಚ್ಚರಿಸಿದರು.