ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿ ತೆರವು

352

ಚಿಕ್ಕಬಳ್ಳಾಪುರ/ ಗುಡಿಬಂಡೆ: ಪಟ್ಟಣದ ಮುಖ್ಯ ರಸ್ತೆಯ  ಅಕ್ಕ-ಪಕ್ಕದಲ್ಲಿರುವ ಹೂವು,ಹಣ್ಣು-ತರಕಾರಿ ವ್ಯಾಪಾರಸ್ಥರ  ಅಂಗಡಿಗಳನ್ನು  ಸ್ಥಳೀಯ ಪಟ್ಟಣ ಪಂಚಾಯತಿ ಅಧಿಕಾರಿಗಳು ಪೊಲೀಸರ ನೆರವಿ ನೊಂದಿಗೆ ತೆರವುಗೊಳಿಸಿದ  ಘಟನೆನಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ 2ನೇ ವಾರ್ಡಿನ
ಸದಸ್ಯೆ ಲಕ್ಷ್ಮೀಕಾಂತಮ್ಮ, ಪಟ್ಟಣದಲ್ಲಿ ಬಹಳಷ್ಟು ಜನ ಬಡವರಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಕೆಲವರು ತಳ್ಳುವ ಬಂಡಿಗಳಲ್ಲಿ ಹಣ್ಣುಗಳ ವ್ಯಾಪಾರ, ಹೂವು ವ್ಯಾಪಾರ, ಬಳೆ ವ್ಯಾಪಾರ ಸೇರಿದಂತೆ ಸಣ್ಣದಾದ ವ್ಯಾಪರ ಮಾಡುತ್ತಿದ್ದಾರೆ. ಇವರಿಗೆ ಪಟ್ಟಣ ಪಂಚಾಯತಿ ವತಿಯಿಂದಲೇ ಗುರುತಿನ ಚೀಟಿ ನೀಡಿಪ್ರತಿ ನಿತ್ಯ 10-20 ರೂಪಾಯಿಗಳ ಕರ ಸಹ ವಸೂಲಿ
ಮಾಡುತ್ತಿದ್ದಾರೆ. ಆದರೆ ಏಕಾಏಕಿ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ
ಅಂಗಡಿಗಳನ್ನು ತೆರವುಗೊಳಿಸಿ ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಅಲ್ಲದೇ ಪ.ಪಂ. ಗೆ ಶುಲ್ಕ ನೀಡದೇ ಅನೇಕ ಫ್ಲೆಕ್ಸಗಳನ್ನು ಹಾಕುತ್ತಾರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ
ಅಧಿಕಾರಿಗಳು ಬಡವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದರು.

ನಂತರ ಪ.ಪಂ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್
ಕುಮಾರ್ ಮಾತನಾಡಿ, ಇತ್ತೀಚಿಗೆ ತಾಲ್ಲೂಕು ಕಛೇರಿ ಆವರಣದಲ್ಲಿ ಅಳವಡಿಸಲಾಗಿದ್ದ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಹೋಗುವ ಸಾರ್ವಜನಿಕರಿಗೆ ಅಂಗಡಿ ಅಡ್ಡವಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದೇವೆ
ವಿನಃ ಇದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಭಾವವಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಂತರ ಬೀದಿ ವ್ಯಾಪಾರಿಯೊರ್ವ ಮಾತನಾಡಿ ನಾನು ಸುಮಾರು ತಿಂಗಳುಗಳಿಂದ ಇದೇ ಜಾಗದಲ್ಲಿ ಹಣ್ಣುಗಳ ವ್ಯಾಪಾರ ನಡೆಸುತ್ತಿದ್ದೇನೆ. ಶುದ್ದ ಕುಡಿಯುವ ನೀರಿನ ಘಟಕಕ್ಕೆ ತೆರಳಲು ನನ್ನ ಅಂಗಡಿ ಅಡ್ಡವಾಗಿದೆ ಎಂದು ಹೇಳಿ ಪಟ್ಟಣದ
ಕೆಲವರು ಉದ್ದೇಶ ಪೂರ್ವಕವಾಗಿ ನನ್ನ ಅಂಗಡಿಯನ್ನು ಖಾಲಿ ಮಾಡಿಸಲು ಪಟ್ಟಣ ಪಂಚಾಯತಿಗೆ ದೂರು ನೀಡಿದ್ದಾರೆ. ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ನನ್ನ ಅಂಗಡಿ
ತೆರವು ಗೊಳಿಸಿದ್ದರಿಂದ ಜೀವನನಡೆಸುವುದು ಕಷ್ಟಕರವಾಗಿದೆ ಎಂದು ನೋವನ್ನು ತೋಡಿಕೊಂಡರು.