ಉರಿಬಿಸಿಲಲ್ಲಿ ಸಾಗಿ ಬರುತ್ತಿದೆ ಸಾವಿರ ಸಾವಿರ ಕಾರ್ಮಿಕರ ದಂಡು:

313

ಚಿತ್ರದುರ್ಗ: ಅಧಿಕಾರಕ್ಕೆ ಬರುವ ಮುನ್ನ ಬೆಂಗಳೂರಿ ನಿಂದ ಬಳ್ಳಾರಿಗೆ ನಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸುದ್ದಿ ಮಾಡಿದ್ದರು. ಇಂದು ಬಳ್ಳಾರಿ ಯಿಂದ ಬೆಂಗಳೂರಿಗೆ ಸದ್ದಿಲ್ಲದೆ ಉರಿಬಿಸಿಲಲ್ಲಿ ನಡೆದು ಬರುತ್ತಿದೆ _1000 ಜನ ಬಡ ಕಾರ್ಮುಕರ ದಂಡು*. ನಿಜ, ಇದೊಂದು ಅಭೂತಪೂರ್ವ ಹೋರಾಟ. ತುಂಗಭದ್ರಾ ಅಚ್ಚುಕಟ್ಟೆ ಪ್ರದೇಶಕ್ಕೆ ನೀರುಣಿಸುವ ಹಂಗಾಮಿ ಕಾರ್ಮಿಕರು ಕನಿಷ್ಟ ಕೂಲಿಗಾಗಿ ಹೋರಾಟ ಆರಂಭಿಸಿ ಇಲ್ಲಿಗೆ 23 ದಿನಗಳಾದವು. ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಛೇರಿ ಇರುವ ಮುನಿರಾಬಾದಿನಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಭಾಗದ ಹಂಗಾಮಿ ಕಾರ್ಮಿಕರು ಕನಿಷ್ಟ ಕೂಲಿಯನ್ನು ಜಾರಿ ಮಾಡಲು ಒತ್ತಾಯಿಸಿ ಟಿಯುಸಿಐ[ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ]*ದ ನೇತೃತ್ವದಲ್ಲಿ ಕಳೆದ ತಿಂಗಳು ಮಾರ್ಚ್ 17 ರಿಂದ ಅನಿಧಿಷ್ಟ ಧರಣಿಯನ್ನು ಆರಂಭಿಸಿದರು. ವೇತನವನ್ನು 8400ರಿಂದ 16950 ಕ್ಕೆ ಹೆಚ್ಚಿಸಬೇಕು ಮತ್ತು ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು ಎಂಬುದು ಅವರ ಬೇಡಿಕೆಗಳಾಗಿವೆ. ಧರಣಿ ಹೋರಾಟ, ಉಪವಾಸ ಮುಷ್ಕರ, ರಸ್ತಾ ರೋಕೋ, ಕಛೇರಿಗೆ ಬೀಗಮುದ್ರೆ ಹೋರಾಟ ಯಾವುದನ್ನು ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಜಗ್ಗಿಲ್ಲ. ಸಾಲದೆಂಬಂತೆ ಚೀಫ್ ಇಂಜಿನಿಯರ್ ಕಟ್ಟಿಮನಿ ನಿಮ್ಮ ಬೇಡಿಕೆ ಈಡೇರ ಬೇಕಿದ್ದರೆ ಮುಖ್ಯಮಂತ್ರಿಯನ್ನೇ ಕೇಳಿ ಎಂದು ಎಲ್ಲರೆದುರು ಕೂಗಿ ಹೇಳಿದ್ದಾರೆ. ಅದನ್ನೇ ಪಣವಾಗಿ ತೆಗೆದುಕೊಂಡ ಕಾರ್ಮಿಕರು ಬಟ್ಟೆಗಂಟು ಬೆನ್ನಿಗಿಟ್ಟುಕೊಂಡು, ಕೈಯಲ್ಲೊಂದು ನೀರಿನ ಬಾಟಲಿ ಹಿಡಿದು ರಸ್ತೆ ತುಂಬಿ ಬೆಂಗಳೂರಿನತ್ತ ಹೊರಟೇ ಬಿಟ್ಟಿದ್ದಾರೆ.

40 ಡಿಗ್ರಿ ಉರಿಬಿಸಿಲಲ್ಲಿ, ದಣಿವಾರಿಸಿಕೊಳ್ಳಲೂ ಅವಕಾಶವಿಲ್ಲದೆ ಕಳೆದ 5 ದಿನಗಳಿಂದ ಸತತವಾಗಿ ನಡಿಯುತ್ತಲೇ ಇದ್ದಾರೆ. ಬೆವರು ಇಳಿಯುತ್ತಿದ್ದರೂ ಹೋರಾಟದ ಕೆಚ್ಚು ಕೊಂಚವೂ ಇಳಿಯದಿರುವುದು ಅಚ್ಚರಿಯೆನಿಸುತ್ತದೆ.

ಇಂದು ನಮ್ಮೂರು ನಲ್ಲಿ ನಾನು, ಜನಶಕ್ತಿಯ ತೋರಣಘಟ್ಟ, ಪುರುಶೋತ್ತಮ್, ಚಿತ್ರದುರ್ಗದ ದಲಿತ ಸಂಘಟನೆಯ ರಂಗಪ್ಪ, ಕೋಮು ಸೌಹಾರ್ದ ವೇದಿಕೆಯ ಶಫೀಉಲ್ಲಾ, ಕಟ್ಟಡ ಕಾರ್ಮಿಕರ ಸಂಘಟನೆಯ ವೈ.ಕುಮಾರ್, ಕೊಳೆಗೇರಿ ಸಂಘಟನೆಯ ಸ್ಲಂ ಗಣೇಶ್, ಕರ್ನಾಟಕ ರಾಜ್ಯ ರೈತ ಸಂಘದ ಧನಂಜಯ ಮುಂತಾದವರು ಕಾರ್ಮಿಕರ ಈ ದಿಟ್ಟ ಹೋರಾಟವನ್ನು ಬೆಂಬಲಿಸಿ ನಮ್ಮೂರು ಚಿತ್ರದುರ್ಗದಲ್ಲಿ ಅವರ ಜೊತೆ ಕೆಲಹೊತ್ತು ಹೆಜ್ಜೆ ಹಾಕಿದೆವು. ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡೆವು.

ಏಪ್ರಿಲ್ 14ಕ್ಕೆ ಬೆಂಗಳೂರು ತಲುಪಬೇಕು. ಬೆಂಗಳೂರಿನಲ್ಲಿ ಜನತೆಯ ಹಕ್ಕೊತ್ತಾಯಗಳ ದಿನವಾಗಿ ನಡೆಯುತ್ತಿರುವ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಮುಖ್ಯಮಂತ್ರಿಯ ಮನೆ ಎದುರು ಸಮಸ್ಯೆ ಬಗೆಹರಿಯುವ ತನಕ ಕೂತೇಬಿಡಬೇಕು ಎಂಬ ಧೃಡ ನಿಲುವಿನ ಜೊತೆ ಈ ಕಾರ್ಮಿಕ ಬಂಧುಗಳು ನಡಿಯುತ್ತಿದ್ದಾರೆ. ಪೋಲೀಸರ ಒತ್ತಡ ಆರಂಭವಾಗಿದೆ. ನೀವು ವಾಹನ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದೀರಿ, ಹೈವೇನಲ್ಲಿ ನಡೆಯಲು ಬಿಡುವುದಿಲ್ಲ, ಇತ್ಯಾದಿ ಕಿರುಕುಳಗಳು ಆರಂಭವಾಗಿವೆ. ಇವು ಎಲ್ಲಿಗೆ ಹೋಗಿ ನಿಲ್ಲುತ್ತವೆಯೋ ಗೊತ್ತಿಲ್ಲ.

ಉರಿಬಿಸಿಲಿನಲ್ಲಿ ಸಾಗುತ್ತಿರುವ ಈ ಮಹಾನ್ ಜಾಥ ಮಾಧ್ಯಮಗಳಲ್ಲಿ ಇನ್ನೂ ಯಾವ ಸ್ಥಾನವನ್ನೂ ಪಡೆಯದಿರುವುದು ದುರಂತ. ಇನ್ನು ಸರ್ಕಾರದ ಕಿವಿ ತೆರೆದುಕೊಳ್ಳುವುದಾದರೂ ಹೇಗೆ?

ಮಿತ್ರರೇ ಬನ್ನಿ. ನಾವಾದರೂ ಇದರ ಬಗ್ಗೆ ದೊಡ್ಡ ದನಿಯಲ್ಲಿ ಕೂಗೆತ್ತೋಣ. ಡಾಂಬರು ರಸ್ತೆಯನ್ನು ಬೆವರಿನಿಂದ ತೊಳೆಯುತ್ತಾ ಬರುತ್ತಿರುವ ಕಾರ್ಮಿಕ ಬಂಧುಗಳ ನೆರವಿಗೆ ಧಾವಿಸೋಣ. ಮಾಧ್ಯಮ, ಸಮಾಜ ಮತ್ತು ಸರ್ಕಾರ ಈ ಕಡೆ ನೋಡಲೇ ಬೇಕಾದ ವಾತಾವರಣವನ್ನು ನಿರ್ಮಿಸೋಣ.

ಹೋರಾಟದ ಬಿಗಿ ಮುಷ್ಠಿಯೊಂದಿಗೆ,

ನಿಮ್ಮ, ನೂರ್ ಶ್ರೀಧರ್